ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಜನರಿಗೆ ಜನರಿಗೆ ನೀಡಿರುವ ಭರವಸೆಯಂತೆ 10 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟೇ ಕೊಡುತ್ತೇವೆ ಎಂದು ಹಾರ ಸಚಿವ ಕೆ. ಹೆಚ್. ಮುನಿಯಪ್ಪ (KH Muniyappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಡಿಶಾ, ಚತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ ಎಲ್ಲಾ ಕಡೆಯಿಂದ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ. ಆದ್ರೂ ನಾಳೆ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುತ್ತೇನೆ. ಈ ಮೂಲಕ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಎಫ್ಸಿಐ ಬಳಿ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಅದರಲ್ಲಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮಗೆ ಬೇಕಾಗಿದೆ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಯ ಪ್ರಯತ್ನದ ಜೊತೆಗೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪ್ರಯತ್ನ ಮಾಡುತ್ತೇವೆ. ಈ ಪ್ರಕ್ರಿಯೆ ಸ್ವಲ್ಪ ವಿಳಂಬ ಆಗಬಹುದು. ಕೇಂದ್ರೀಯ ಭಂಡಾರ, ನಾಫೆಡ್, ಎನ್ಸಿಸಿಎಫ್ ನಿಂದ ಅಕ್ಕಿ ಖರೀದಿ ಮಾಡಬೇಕಾಗಿದೆ. ಇದು ಸ್ವಲ್ಪ ವಿಳಂಬವಾಗಲಿದೆ. ಕಾನೂನು ಮತ್ತು ಟೆಂಡರ್ ಪ್ರಕ್ರಿಯೆಗಳಿಂದ ಸ್ವಲ್ಪ ವಿಳಂಬವಾಗಲಿದೆ. ಹಿಂದೆ ಇದೇ ಸಂಸ್ಥೆಗಳು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುತ್ತಿದ್ದವು. ಈ ಸಂಸ್ಥೆಗಳಿಗೆ ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಹೇಳಲಾಗಿದೆ. ಸ್ವಲ್ಪ ವಿಳಂಬವಾಗಿಯಾದರೂ ಅಕ್ಕಿಯನ್ನು ನಾವು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಸರ್ಕಾರದಿಂದ ಅಕ್ಕಿ ಕೊಡಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ರಾಜ್ಯಗಳಿಂದ ಅಕ್ಕಿ ಖರೀದಿಗೆ ಯತ್ನ ಮಾಡುತ್ತೇವೆ. ಬಹಳ ದೂರದಿಂದ ಖರೀದಿಸುವಾಗ ಸಾಗಣೆ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ಕೇಂದ್ರೀಯ ಸಂಸ್ಥೆಗಳಿಂದ ಖರೀದಿ ಮಾಡುತ್ತೇವೆ. ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.