July 23, 2026
Thursday, July 23, 2026
spot_img

HEALTH | ಹವಾಮಾನ ಬದಲಾದಾಗ ಬರುವ ನೆಗಡಿ-ಕೆಮ್ಮಿಗೆ ಇವೇ ಬೆಸ್ಟ್ ಮದ್ದು; ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತೆ!

ಹವಾಮಾನ ಬದಲಾದಾಗ ಅಥವಾ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ನೆಗಡಿ, ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ತಕ್ಷಣವೇ ಅಲೋಪತಿ ಮಾತ್ರೆಗಳನ್ನು ನುಂಗುವ ಬದಲು, ನಮ್ಮ ಅಡುಗೆಮನೆಯಲ್ಲಿರುವ ಸಾಂಬಾರ ಪದಾರ್ಥಗಳನ್ನು ಬಳಸಿ ಕಷಾಯ ತಯಾರಿಸಿ ಕುಡಿಯುವುದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ನಮ್ಮ ಹಿರಿಯರು ಕಾಲಕಾಲದಿಂದಲೂ ಬಳಸಿಕೊಂಡು ಬಂದಿರುವ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೆಮ್ಮು-ನೆಗಡಿಯನ್ನು ಬುಡದಿಂದ ಚಿವುಟುವ 5 ಅತ್ಯುತ್ತಮ ಸಾಂಪ್ರದಾಯಿಕ ಕಷಾಯಗಳ ಬಗ್ಗೆ ತಿಳಿಯೋಣ.

ಶುಂಠಿ-ತುಳಸಿ ಕಷಾಯ
ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಮತ್ತು ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶ್ವಾಸಕೋಶದ ಸೋಂಕನ್ನು ತಕ್ಷಣವೇ ನಿಯಂತ್ರಿಸುತ್ತವೆ. ಒಂದು ಲೋಟ ನೀರಿಗೆ ಅರ್ಧ ಇಂಚು ಜಜ್ಜಿದ ಶುಂಠಿ ಮತ್ತು 7-8 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧ ಲೋಟವಾದಾಗ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಬಿಸಿಯಾಗಿರುವಾಗಲೇ ಕುಡಿದರೆ ಒಣ ಕೆಮ್ಮು ಮತ್ತು ಗಂಟಲು ಕೆರೆತ ಮಾಯವಾಗುತ್ತದೆ.

ಕಾಳುಮೆಣಸು-ಜೀರಿಗೆ ಕಷಾಯ
ಕಾಳುಮೆಣಸು ಗಂಟಲಿನಲ್ಲಿ ಕಫ ಕಟ್ಟಿರುವುದನ್ನು ಕರಗಿಸಲು ಸಹಾಯ ಮಾಡಿದರೆ, ಜೀರಿಗೆಯು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಒಂದು ಚಮಚ ಜೀರಿಗೆ ಮತ್ತು ಅರ್ಧ ಚಮಚ ಕಾಳುಮೆಣಸನ್ನು ಲಘುವಾಗಿ ಜಜ್ಜಿ, ಒಂದೂವರೆ ಲೋಟ ನೀರಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಸೋಸಿಕೊಂಡು ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ. ಮೂಗು ಕಟ್ಟುವುದು ಮತ್ತು ಸೀನು ಬರುವುದನ್ನು ತಕ್ಷಣ ನಿಲ್ಲಿಸುತ್ತದೆ.

ಲವಂಗ-ದಾಲ್ಚಿನ್ನಿ ಚಹಾ
ಲವಂಗ ಮತ್ತು ದಾಲ್ಚಿನ್ನಿ ಅತ್ಯಂತ ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿವೆ. ಇವು ದೇಹದಲ್ಲಿ ಇನ್‌ಫೆಕ್ಷನ್ ಹರಡುವುದನ್ನು ತಡೆಯುತ್ತವೆ. 2 ಲವಂಗ ಮತ್ತು ಒಂದು ಸಣ್ಣ ತುಂಡು ದಾಲ್ಚಿನ್ನಿಯನ್ನು 2 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟಾದಾಗ ಗ್ಯಾಸ್ ಆಫ್ ಮಾಡಿ, ಉಗುರುಬೆಚ್ಚಗಾದಾಗ ಕುಡಿದರೆ ನೆಗಡಿಯಿಂದ ಬರುವ ತಲೆನೋವು ಮತ್ತು ಮೈಕೈ ನೋವಿಗೆ ಇದು ಉತ್ತಮ ಪರಿಹಾರ.

ಕೊತ್ತಂಬರಿ ಬೀಜ ಕಷಾಯ
ಕೊತ್ತಂಬರಿ ಬೀಜಗಳು ದೇಹವನ್ನು ತಂಪಾಗಿಸುವುದರ ಜೊತೆಗೆ ನೆಗಡಿಯಿಂದ ಉಂಟಾಗುವ ಜ್ವರದ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಇದು ಮಲೆನಾಡು ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಒಂದು ದೊಡ್ಡ ಚಮಚ ಧನಿಯಾ ಬೀಜಗಳನ್ನು ಸ್ವಲ್ಪ ಜಜ್ಜಿ, 2 ಕಪ್ ನೀರು ಮತ್ತು ಸ್ವಲ್ಪ ಬೆಲ್ಲ ಹಾಕಿ 7-8 ನಿಮಿಷ ಚೆನ್ನಾಗಿ ಕುದಿಸಿ ಸೋಸಿಕೊಂಡು ಕುಡಿದರೆ ಜ್ವರದ ತಾಪವನ್ನು ತಗ್ಗಿಸಿ, ಬಾಯಿಯ ರುಚಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಗೋಲ್ಡನ್ ಮಿಲ್ಕ್
ಅರಿಶಿನದಲ್ಲಿರುವ ‘ಕುರ್ಕುಮಿನ್’ ಎಂಬ ಅಂಶವು ನೈಸರ್ಗಿಕ ಆ್ಯಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಶುದ್ಧ ಅರಿಶಿನ ಪುಡಿ ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ, ಮಲಗುವ ಮುನ್ನ ಕುಡಿದರೆ ರಾತ್ರಿ ವೇಳೆ ಬರುವ ನಿರಂತರ ಕೆಮ್ಮನ್ನು ತಡೆದು ನೆಮ್ಮದಿಯ ನಿದ್ದೆ ಬರುವಂತೆ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !