August 13, 2026
Thursday, August 13, 2026
spot_img

WEATHER | ಮುಂಗಾರು ಆರ್ಭಟ: ಉತ್ತರ ಕನ್ನಡ, ಶಿವಮೊಗ್ಗ ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಾಲ್ಕು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ:

ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಭಾಗಗಳಲ್ಲಿ ಈಗಾಗಲೇ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿ ಸೂಚಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ:

ಮಂಗಳೂರು, ಉಳ್ಳಾಲ, ಮೂಡುಬಿದಿರೆ, ಬಂಟ್ವಾಳ ಮತ್ತು ಮುಲ್ಕಿ ತಾಲೂಕುಗಳ ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ಮಾತ್ರ ಇಂದು ರಜೆ ಇರಲಿದೆ. ಇನ್ನು, ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಅಂಗನವಾಡಿಯಿಂದ ಹಿಡಿದು ಪಿಯು ಕಾಲೇಜುಗಳಿಗೂ ರಜೆ ವಿಸ್ತರಿಸಲಾಗಿದೆ. ಉಡುಪಿಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.

ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತ ಹಾಗೂ ಪೂರಕ ಸಮಸ್ಯೆಗಳು ಎದುರಾಗಿರುವುದರಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಗಾಳಿಯ ತೀವ್ರತೆ ಮತ್ತು ಕಡಲ್ಕೊರೆತ:

ಸಮುದ್ರದಲ್ಲಿ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿರುವುದರಿಂದ ಉಡುಪಿ ಮತ್ತು ಕಾರವಾರದ ಕರಾವಳಿ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮೀನುಗಾರರು ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ:

ಧಾರಾಕಾರ ಮಳೆಯಿಂದಾಗಿ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ಶರಾವತಿ ಮತ್ತು ವರಾಹಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ನದಿ ತೀರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !