Tuesday, November 18, 2025

weather | ಚಳಿ ನಡುವೇನೂ ಮಳೆ ಇದ್ಯಂತೆ: ಐಎಂಡಿ ಹೊಸ ಎಚ್ಚರಿಕೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಈಗಾಗಲೇ ತಂಪಿನ ಗಾಳಿ ಹರಿದಾಡುತ್ತಿರುವ ಸಂದರ್ಭದಲ್ಲಿ, ಮುಂದಿನ ಐದು ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಹೊಸ ಮುನ್ಸೂಚನೆ ನೀಡಿದೆ. ಶೀತಗಾಳಿ ಮತ್ತು ಮೋಡ ಕವಿದ ವಾತಾವರಣ ಮುಂದುವರಿಯುತ್ತಿರುವ ಕಾರಣ, ರಾಜ್ಯದ ಅನೇಕ ಭಾಗಗಳಲ್ಲಿ ಮತ್ತೆ ಮಳೆ ಬೀಳುವ ನಿರೀಕ್ಷೆ ಇದೆ.

ಬೆಂಗಳೂರನ್ನು ಸೇರಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ-ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ನಿರಂತರ ಮಳೆಯಾಗುವ ಸಾಧ್ಯತೆಯನ್ನು ಇಲಾಖೆ ಸೂಚಿಸಿದೆ. ಕೆಲವು ಭಾಗಗಳಲ್ಲಿ ಮಧ್ಯಮ ಮಳೆಯಷ್ಟೇ ಕಂಡುಬರುವ ಸಾಧ್ಯತೆ ಇದ್ದರೂ, ಕೆಲಡೆ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ.

ಹವಾಮಾನ ತಜ್ಞರು ಜನರಿಗೆ ಮುನ್ನೆಚ್ಚರಿಕೆ ನೀಡಿದ್ದು, ಮಳೆಯ ಅವಧಿಯಲ್ಲಿ ಅನಾವಶ್ಯಕ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಹಲವು ದಿನಗಳ ಕಾಲ ತಂಪಾದ ಮತ್ತು ತೇವ ವಾತಾವರಣ ಮುಂದುವರಿಯಲಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮೋಡ ಕವಿದ ಆಕಾಶ ಮತ್ತು ಮಳೆ ಬರಬಹುದು.

ಇದಕ್ಕೆ ಜೊತೆಯಾಗಿ, ರಾಜ್ಯಾದ್ಯಂತ ಶೀತಗಾಳಿ ತೀವ್ರವಾಗಿದ್ದು, ಎಲ್ಲೆಡೆ ಕನಿಷ್ಠ ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಉತ್ತರ ಒಳನಾಡು ಸೇರಿ ಅನೇಕ ಜಿಲ್ಲೆಗಳಲ್ಲಿ ಶೀತಗಾಳಿ ತೀವ್ರಗೊಳ್ಳುವ ಸಂಭವವಿದ್ದು, ಇನ್ನಷ್ಟು ತಂಪಾದ ಹವಾಮಾನ ಎದುರಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

error: Content is protected !!