March 22, 2026
Sunday, March 22, 2026
spot_img

WEATHER | ರಾಜ್ಯದಲ್ಲಿ ಮಳೆಯ ಜೊತೆ ತಾಪಮಾನ ಕೂಡ ಏರಿಕೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಹವಾಮಾನ ಇಲಾಖೆ ಮಾರ್ಚ್ 22ರಿಂದ 27ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮಳೆಯ ಮುನ್ಸೂಚನೆ ನೀಡಿದೆ. ಜೊತೆಗೆ ರಾಜ್ಯದ ಕರಾವಳಿ ಭಾಗಗಳಲ್ಲಿ ತೀವ್ರ ಬಿಸಿಲು ಮತ್ತು ಆರ್ದ್ರತೆ ಹೆಚ್ಚುವ ಸಾಧ್ಯತೆ ಇದೆ ಎಂದೂ ಹೇಳಿದೆ.

ಮುಂದಿನ ಎರಡು ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬಿಸಿಲಿನ ತೀವ್ರತೆ ಜೊತೆಗೆ ಆರ್ದ್ರತೆಯೂ ಹೆಚ್ಚಾಗಲಿದೆ. ಆದರೆ ಮಾರ್ಚ್ 24ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಇಂದು ಮತ್ತು ನಾಳೆ ಮಲೆನಾಡಿನ ಕೊಡಗು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಮಾರ್ಚ್ 23ರಿಂದ ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯಾಗುವ ಲಕ್ಷಣಗಳಿವೆ. ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯೂ ಸಂಭವಿಸಬಹುದು ಎಂದು ಇಲಾಖೆ ಎಚ್ಚರಿಸಿದೆ.

ಉತ್ತರ ಒಳನಾಡಿನ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಮಳೆಯ ಸಾಧ್ಯತೆ ಇದ್ದು, ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಾರ್ಚ್ 24 ಬಳಿಕ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಬಂಗಾಳ ಕೊಲ್ಲಿಯ ಮಾರುತ ಶಿಥಿಲಗೊಳ್ಳುವುದು ಹಾಗೂ ಅರಬ್ಬಿ ಸಮುದ್ರದ ವಾತಾವರಣದ ಬದಲಾವಣೆಗಳಿಂದ ರಾಜ್ಯದ ಹವಾಮಾನದಲ್ಲಿ ಈ ರೀತಿಯ ಏರುಪೇರುಗಳು ಕಂಡುಬರುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !