October 18, 2026
Sunday, October 18, 2026
spot_img

ವೈದ್ಯೆ ವಂದನಾ ಹತ್ಯೆ ಕೇಸ್: 27 ಬಾರಿ ಇರಿದು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 42 ವರ್ಷದ ಶಾಲಾ ಶಿಕ್ಷಕ ಜಿ ಸಂದೀಪ್ ಗೆ ನ್ಯಾಯಾಲಯವು ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಕುರಿತು ಕೊಲ್ಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅಪರಾಧಿ ಜಿ. ಸಂದೀಪ್‌ಗೆ 30 ವರ್ಷಗಳ ಜೈಲು ಶಿಕ್ಷೆ ನೀಡಿದೆ. ಈ ಅವಧಿ ಮುಗಿದ ಬಳಿಕ ಜೀವಾವಧಿ ಶಿಕ್ಷೆ ಜಾರಿಗೆಯಾಗಲಿದೆ.

ಪ್ರಕರಣದ ಹಿನ್ನೆಲೆ
2023ರ ಮೇ 10ರಂದು ಕೊಟ್ಟಾಯಂ ಜಿಲ್ಲೆಯ ಕಾಡುತುರುತಿ ಮೂಲದ ಡಾ ವಂದನಾ ದಾಸ್ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಸಂದೀಪ್‌ನನ್ನು ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಗಾಯವಾಗಿದ್ದ ಕಾಲಿಗೆ ವೈದ್ಯೆ ವಂದನಾ ಬ್ಯಾಂಡೇಜ್ ಹಾಕುತ್ತಿದ್ದ ಸಮಯ ಅಲ್ಲೇ ಇದ್ದ ಶಸ್ತ್ರಚಿಕಿತ್ಸಾ ಕತ್ತರಿಯಿಂದ ಸಂದೀಪ್ ಏಕಾಏಕಿ ವಂದನಾ ಮೇಲೆ 27 ಬಾರಿ ಇರಿದು, ಹಲ್ಲೆ ನಡೆಸಿದ್ದನು.

ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ವಂದನಾರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಈ ಪ್ರಕರಣ ಸಂಬಂಧ ಕೋರ್ಟ್ ಸಂದೀಪ್‌ ನನ್ನು ಅಪರಾಧಿ ಎಂದು ಘೋಷಿಸಿತು. ಕೇರಳ ಆರೋಗ್ಯ ಸೇವಾ ವ್ಯಕ್ತಿಗಳು ಮತ್ತು ಸಂಸ್ಥೆಗಳ (ಹಿಂಸೆ ತಡೆಗಟ್ಟುವಿಕೆ) ಕಾಯ್ದೆ, 2012 ಅಡಿಗೂ ಶಿಕ್ಷೆ ವಿಧಿಸಲಾಯಿತು.

ವಿಚಾರಣೆ ಸಮಯ 70ಕ್ಕೂ ಹೆಚ್ಚು ಸಾಕ್ಷಿಗಳು ನ್ಯಾಯಾಲಯದ ಮುಂದೆ ಸಾಕ್ಷ್ಯ ನೀಡಿದ್ದು,ಎಲ್ಲಾ ಸಾಕ್ಷ್ಯಾಧಾರಗಳು ಆರೋಪಿಯ ವಿರುದ್ಧವೇ ಇತ್ತು. ದಾಳಿ ಪೂರ್ವಯೋಜಿತವಾಗಿಯೇ ನಡೆದದ್ದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

Must Read