ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರ ತಂದೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಗಿದ್ದು, ಈ ಹಿನ್ನೆಲೆ ಮದುವೆ ದಿಢೀರ್ ಮುಂದೂಡಿಕೆ ಮಾಡಲಾಗಿದೆ.
ಇದೀಗ ಸ್ಮೃತಿ ಮಂಧನಾ ಅವರು ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಡಿಲೀಟ್ ಮಾಡಿದ್ದಾರೆ. ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸ್ಮೃತಿ ತೆಗೆದುಹಾಕಿದ್ದಾರೆ.
ಪಲಾಶ್ ಮುಚ್ಚಲ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮಧ್ಯದಲ್ಲಿ ಪ್ರಪೋಸ್ ಮಾಡಿದ್ದ ವಿಡಿಯೋವನ್ನೂ ಸ್ಮೃತಿ ಡಿಲೀಟ್ ಮಾಡಿದ್ದಾರೆ. ಸ್ಮೃತಿ ಮಾತ್ರವಲ್ಲದೆ, ಅವರ ಆಪ್ತ ಸ್ನೇಹಿತರಾದ ಜೆಮಿಮಾ ರೋಡ್ರಿಗ್ಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಸ್ಮೃತಿಯ ಮದುವೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ. ಆದರೆ, ಪಲಾಶ್ ಮುಚ್ಚಲ್ ಅವರ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ಗಳು ಇನ್ನೂ ಇವೆ.
ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ ಮದುವೆ ಸಿದ್ಧತೆಯಲ್ಲಿದ್ದ ಸ್ಮೃತಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ವಿಡಿಯೋಗಳು ಅಭಿಮಾನಿಗಳಿಗೆ ಇಷ್ಟವಾಗಿದ್ದವು.
ನಿನ್ನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ನಡೆಯಬೇಕಿತ್ತು. ಆದರೆ ಮದುವೆಯ ದಿನದಂದೇ ಸ್ಮೃತಿಯ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಇದರಿಂದ ಮದುವೆಯನ್ನು ಮುಂದೂಡಲಾಯಿತು.
ಬೆಳಗಿನ ಉಪಾಹಾರ ಸೇವಿಸುವಾಗ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಶ್ರೀನಿವಾಸ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ಪಲಾಶ್ ಮುಚ್ಚಲ್ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈರಲ್ ಸೋಂಕು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದಾಗಿ ಮುಚ್ಚಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮದುವೆ ಮುಂದೂಡಿದ್ದರಿಂದ ಪಲಾಶ್ ಮುಚ್ಚಲ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಇದರಿಂದಲೇ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ತಾಯಿ ಅಮಿತಾ ಮುಚ್ಚಲ್ ಹೇಳಿದ್ದಾರೆ.
ಇನ್ನು ಸ್ಮೃತಿ ಮಂಧನಾ ಅವರು ತಮ್ಮ ತಂದೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮದುವೆ ಕಾರ್ಯಕ್ರಮವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

