ಹೊಸದಿಗಂತ ವರದಿ ಮೈಸೂರು:
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಭಾರ ಹೊತ್ತು ಸಾಗಿದೆ. ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ ನಡೆಸಲು ತೀರ್ಮಾನಿಸಲಾಗಿದ್ದು, 300 ಕೆ.ಜಿ ಮರಳಿನ ಮೂಟೆ ಹೊರಿಸುವ ಮುಖಾಂತರ ತಾಲೀಮು ನಡೆಸಲಾಗಿದೆ.
ಜಂಬೂಸವಾರಿ ಸಾಗುವ ರಾಜ ಬೀದಿಗಳಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಭಾರ ಹೊತ್ತು ಸಾಗಿದೆ. ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಆನೆಗಳಿಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಲಾಯಿತು.
ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಯಿತು. ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ ಇಂದು ತಾಲೀಮು ನಡೆಸಲಾಗುತ್ತಿದೆ. ಮೊದಲು 300 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೆಷನ್ ಆಗಿ ಐದು ದಿನ ನಡೆಸಲಾಗುತ್ತದೆ. 300ಕೆ.ಜಿ.ಆದ ನಂತರ ಮತ್ತೆ ಹೆಚ್ಚಿಸುತ್ತೇವೆ. 750ಕೆಜಿ ಬರುವ ತನಕ ತಾಲೀಮು ಮಾಡುತ್ತೇವೆ. ಇಲ್ಲಿಂದ ಬನ್ನಿಮಂಟಪ 5ಕಿ.ಮಿ.ಇದೆ. ನಾವು ನಿನ್ನೆ ಮೊನ್ನೆ ಎಲ್ಲ ಬರಿ ವಾಕ್ ಮಾಡಿಸಿದ್ದೇವೆ. ಆ ಟೈಮ್ ನಲ್ಲಿ ನಮಗೆ ಇಲ್ಲಿಂದ ಅಲ್ಲಿಗೆ ತಲುಪಲು ಒಂದು ಕಾಲು ಗಂಟೆ ಹಿಡಿದಿದೆ. ಇವತ್ತು ತೂಕ ಹಾಕಿ ಆನೆಗಳು ಸಾಗಲಿವೆ. ಎಷ್ಟು ಗಂಟೆ ಆಗತ್ತೆ ನೋಡಬೇಕು. ಸೆಪ್ಟೆಂಬರ್ ಮೊದಲ ವಾರ ಎರಡನೇ ಹಂತದ ಆನೆ ಕರೆತರಲಾಗುತ್ತದೆ. ಮರಳ ಮೂಟೆ 300 ಕೆ.ಜಿ, ನಮ್ದಾ, ಗಾದಿ, ಹಗ್ಗ ಎಲ್ಲ ಸೇರಿ 500ರಿಂದ550ಕೆಜಿ ತೂಕವಿರಿಸಿ ಆನೆಗಳು ನಡೆಯುತ್ತಿವೆ. ಹಂತ ಹಂತವಾಗಿ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.
ಅದಕ್ಕಾಗಿ ಈಗಾಗಲೇ ವಿಶೇಷ ಡಯಟ್ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.