ಅಧಿಕ ತೂಕವು ಇಂದಿನ ಪೀಳಿಗೆಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತೂಕ ಇಳಿಸಿಕೊಳ್ಳಲು ಅನೇಕ ಮಂದಿ ಜಿಮ್, ಯೋಗ, ಡಯೆಟ್, ವರ್ಕೌಟ್ ಮುಂತಾದ ಹಲವು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಇದರಿಂದ ಹೆಚ್ಚು ಪ್ರಯೋಜನ ಕಾಣದೇ ನಿರಾಶರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸರಿಯಾದ ಆಹಾರ ಪದ್ಧತಿಯನ್ನು ಪಾಲಿಸುವುದು ಮುಖ್ಯ. ಅದರಲ್ಲೂ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ತೂಕ ನಿಯಂತ್ರಣಕ್ಕೆ ಸಹ ಸಹಕಾರಿಯಾಗುತ್ತವೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ದೈನಂದಿನ ಆಹಾರದಲ್ಲಿ ಕೆಲವು ವಿಶೇಷ ಹಣ್ಣುಗಳನ್ನು ಸೇರಿಸಿಕೊಂಡರೆ ತೂಕ ಇಳಿಕೆಗೆ ಸಹಾಯವಾಗುತ್ತದೆ.
ಕಲ್ಲಂಗಡಿ (Watermelon): ಕಲ್ಲಂಗಡಿ 90% ನೀರಿನಿಂದ ಕೂಡಿದ್ದು, ದೇಹದ ಹೈಡ್ರೇಶನ್ ಕಾಪಾಡಿಕೊಳ್ಳಲು ಹಾಗೂ ಹಸಿವು ತಣಿಸಲು ಸಹಕಾರಿಯಾಗುತ್ತದೆ. 100 ಗ್ರಾಂ ಕಲ್ಲಂಗಡಿಯಲ್ಲಿ ಕೇವಲ 30 ಕ್ಯಾಲೋರಿಗಳಷ್ಟೇ ಇರುತ್ತವೆ. ಇದರಲ್ಲಿರುವ ಅರ್ಜಿನೈನ್ ಎಂಬ ಅಮೈನೋ ಆಮ್ಲವು ಕೊಲೆಸ್ಟ್ರಾಲ್ ಕರಗಿಸಲು ನೆರವಾಗುತ್ತದೆ.
ಪೇರಳೆ (Guava): ಪೇರಳೆ ಫೈಬರ್ ಸಮೃದ್ಧ ಹಣ್ಣು. ಇದು ಹಸಿವನ್ನು ತಣಿಸಿ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇತರ ಹಣ್ಣುಗಳಿಗಿಂತ ಕಡಿಮೆ ಸಕ್ಕರೆಯನ್ನು ಹೊಂದಿರುವುದರಿಂದ ತೂಕ ಇಳಿಕೆಗೆ ಇದು ಉತ್ತಮ. ಪೇರಲದಲ್ಲಿರುವ ವಿಟಮಿನ್ C ಚರ್ಮದ ಆರೋಗ್ಯವನ್ನು ಕಾಪಾಡಿ, ತಾಜಾತನ ನೀಡುತ್ತದೆ.
ಚಕ್ಕೋತ ಹಣ್ಣು (Grapefruit): ಚಕ್ಕೋತ ಹಣ್ಣು ವಿಟಮಿನ್ C, ಫೋಲಿಕ್ ಆಮ್ಲ ಹಾಗೂ ಪೊಟ್ಯಾಸಿಯಮ್‌ನ ಉತ್ತಮ ಮೂಲ. ಇದರಿಂದ ಬೊಜ್ಜು ಕಡಿಮೆಯಾಗುವುದರ ಜೊತೆಗೆ ಮಧುಮೇಹ, ಹೃದಯ ಹಾಗೂ ನರರೋಗ ತಡೆಗಟ್ಟಲು ಸಹಾಯವಾಗುತ್ತದೆ. ಪೆಕ್ಟಿನ್ ಎಂಬ ಅಂಶ ಇದರಲ್ಲಿದ್ದು, ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನೂ ಹೊಂದಿದೆ.
ತೂಕ ಇಳಿಸಿಕೊಳ್ಳುವುದು ಕೇವಲ ಜಿಮ್ ಅಥವಾ ಡಯೆಟ್ ಮೂಲಕ ಮಾತ್ರ ಸಾಧ್ಯವಿಲ್ಲ. ಸರಿಯಾದ ಆಹಾರ ಆಯ್ಕೆ ಮುಖ್ಯ. ಕಲ್ಲಂಗಡಿ, ಪೇರಲ ಹಾಗೂ ಚಕ್ಕೋತ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ತೂಕ ನಿಯಂತ್ರಣಕ್ಕೆ ಸಹಾಯವಾಗುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ಒದಗಿಸುತ್ತವೆ.