ತೂಕ ಇಳಿಸುವ ಪ್ರಯತ್ನಗಳಲ್ಲಿ ನಮಗೆ ಬೇಕಾಗಿರುವುದು ಸರಿಯಾದ ಆಹಾರ ಆಯ್ಕೆ. ಹಲವರು ಕೊಬ್ಬು ಎನ್ನುವ ತಕ್ಷಣ ದೂರ ಓಡುತ್ತಾರೆ. ಆದರೆ, ಎಲ್ಲ ಕೊಬ್ಬುಗಳು ದೇಹಕ್ಕೆ ಕೆಟ್ಟದಲ್ಲ. ಕೆಲವು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು (metabolism) ಚುರುಕುಗೊಳಿಸಿ, ಹಸಿವನ್ನು ನಿಯಂತ್ರಿಸಿ ತೂಕ ಇಳಿಸಲು ನೆರವಾಗುತ್ತವೆ. ಇವುಗಳನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಬಹುದು.
ತೆಂಗಿನ ಎಣ್ಣೆ – ಮೆಟಾಬಾಲಿಸಂ ಚುರುಕುಗೊಳಿಸುತ್ತೆ
ತೆಂಗಿನ ಎಣ್ಣೆ ಅಂದರೆ ಕೇವಲ ತಲೆಗೆ ಮಾತ್ರ ಎಂಬ ಕಾಲ ಮುಗಿದಿದೆ. ಕೇರಳದಂತಹ ರಾಜ್ಯಗಳಲ್ಲಿ ಅಡುಗೆಗೆ ಬಳಸುವ ಈ ಎಣ್ಣೆಯಲ್ಲಿ ಮೆಡಿಯಂ ಚೇನ್ ಫ್ಯಾಟಿ ಆಮ್ಲಗಳು (MCFA) ಇದ್ದು, ದೇಹದಲ್ಲಿ ಶಕ್ತಿ ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಇದು ಹೊಟ್ಟೆ ಹಸಿವನ್ನು ನಿಯಂತ್ರಿಸೋ ಜತೆಗೆ ರಕ್ತಸಂಚಾರ ಮತ್ತು ಹೃದಯ ಆರೋಗ್ಯಕ್ಕೂ ಒಳ್ಳೆಯದು. ಕೆಲವೊಮ್ಮೆ ಅಡುಗೆಗೆ ಎಣ್ಣೆಯಾಗಿ ಬಳಸಿದರೆ, ದೇಹದ ತೂಕ ಇಳಿಸಲು ಸಹಕಾರಿಯಾಗುತ್ತದೆ.
ದನದ ತುಪ್ಪ – ಬಟಿರಿಕ್ ಆಮ್ಲದ ಶಕ್ತಿ
ಮಾರುಕಟ್ಟೆಯಲ್ಲಿರುವ ಕೊಳಕುತುಪ್ಪ ಆರೋಗ್ಯಕ್ಕೆ ಹಾನಿಕರ. ಆದರೆ ಮನೆಯಲ್ಲೇ ಮಾಡಿದ ದನದ ತುಪ್ಪ ದೇಹಕ್ಕೆ ಲಾಭದಾಯಕ. ಇದರಲ್ಲಿ ಬಟಿರಿಕ್ ಆಮ್ಲವಿದ್ದು, ಕೊಬ್ಬನ್ನು ಕರಗಿಸಲು ಸಹಕಾರಿಯಾಗುತ್ತದೆ. ಜೊತೆಗೆ ಒಳ್ಳೆಯ ಕೊಲೆಸ್ಟ್ರಾಲ್‌ನ ಮಟ್ಟವನ್ನು ಸುಧಾರಿಸಿ ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ.
ಅವಕಾಡೋ ಹಣ್ಣು – ಫೈಬರ್ ಜಾಸ್ತಿ, ಹೊಟ್ಟೆ ತುಂಬಿದ ಭಾವ
ಅವಕಾಡೋ ಹಣ್ಣು ಸದ್ಯದ ದಿನಗಳಲ್ಲಿ ಪ್ರತಿ ಫಿಟ್ನೆಸ್ ಚಿಂತಕರ ಫೇವರಿಟ್ ಆಯ್ಕೆ. ಇದರಲ್ಲಿ ಹೆಚ್ಚಿನ ನಾರಿನಾಂಶ ಇದ್ದು, ಹೊಟ್ಟೆಯನ್ನು ತುಂಬಿದಂತೆ ಮಾಡುತ್ತದೆ. ಜೊತೆಗೆ ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯಕ.
ಒಣಹಣ್ಣುಗಳು
ಡ್ರೈ ಫ್ರೂಟ್ಸ್ ಅಂದರೆ ಕೇವಲ ಸಿಹಿಯಾದ್ದರಿಂದ ತೂಕ ಹೆಚ್ಚಿಸುತ್ತವೆ ಅನ್ನೋದು ತಪ್ಪು ಕಲ್ಪನೆ. ಮಿತವಾಗಿ ಸೇವಿಸಿದರೆ, ಈ ಆಹಾರಗಳು ಪ್ರೊಟೀನ್, ಒಳ್ಳೆಯ ಕೊಬ್ಬು, ವಿಟಮಿನ್‌ಗಳಿಂದ ಕೂಡಿವೆ. ವಾಲ್ನೆಟ್, ಬಾದಾಮಿ, ಖರ್ಜುರ ಈ ಎಲ್ಲವನ್ನು ಮಿತ ಪ್ರಮಾಣದಲ್ಲಿ ತಿನ್ನುವ ಮೂಲಕ ತೂಕ ನಿಯಂತ್ರಣ ಸಾಧ್ಯ. ವಿಶೇಷವಾಗಿ ನೆನೆಸಿದ ವಾಲ್ನೆಟ್ ದಿನಕ್ಕೆ 2–3 ಸೇವನೆ ಮಾಡಿದರೆ metabolism ಚುರುಕಾಗುತ್ತದೆ.
ತೂಕ ಇಳಿಸುವಾಗ ಎಲ್ಲ ಎಣ್ಣೆ ಮತ್ತು ಕೊಬ್ಬುಗಳನ್ನು ತಪ್ಪಿಸುವ ಬದಲು, ಆರೋಗ್ಯಕರ ಕೊಬ್ಬುಗಳನ್ನು ಆಯ್ದುಕೊಳ್ಳಿ. ನಿಯಮಿತವಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಜೊತೆಗೆ ಈ ಆಹಾರಗಳು ನಿಮ್ಮ ತೂಕ ಇಳಿಸುವ ಪ್ರಯತ್ನಕ್ಕೆ ಪೂರಕವಾಗಬಹುದು.