ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಮೂರು ವರ್ಷದಲ್ಲಿ 13 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಯೋಜಿಸಿರುವ “ಆರೋಗ್ಯ ಆವಿಷ್ಕಾರ” ಯೋಜನೆಯ ಅಡಿಯಲ್ಲಿ 440.63 ಕೋಟಿ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂಜುಂಡಪ್ಪ ವರದಿಯ ಆಶಯಗಳನ್ನು ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಲಾಗಿದೆ. 42 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಹೊಸ ಆಸ್ಪತ್ರೆಗಳ ನಿರ್ಮಾಣ ಆಗುತ್ತಿದೆ ಎಂದು ಹೇಳಿದರು.
ಈ ಭಾಗದ ಜನರಿಗೆ ಆರೋಗ್ಯ ಸವಲತ್ತು ವಿಸ್ತರಿಸಲು ಒಟ್ಟು 847 ಕೋಟಿ ಕೊಡಲು ಸರ್ಕಾರ ಯೋಜನೆ ರೂಪಿಸಿದೆ ಎಂದರು. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಪುನರುಚ್ಚರಿಸಿದ್ದಾರೆ.