ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಯ ಪೂರ್ವದಿಂದಲೂ ಹಿಂಸಾಚಾರಕ್ಕೆ ಒಳಗಾಗಿದ್ದ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಎಲ್ಲಾ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೂರು ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೂನ್ 8ರಂದು ನಿಗದಿಯಾದಾಗಿನಿಂದ ಹಿಂಸಾಚಾರ ಆರಂಭವಾಗಿತ್ತು. ಜುಲೈ 8ರಂದು ನಡೆದ ಮತದಾನದ ವೇಳೆಯೂ ಅಹಿತಕರ ಘಟನೆಗಳು ವರದಿಯಾಗಿದ್ದವು. ದಾಳಿಯಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದರು. ಈವರೆಗೆ ರಾಜಕೀಯ ಹಿಂಸಾಚಾರಕ್ಕೆ 42 ಮಂದಿ ಬಲಿಯಾಗಿದ್ದಾರೆ.
ಅದಾದ ಬಳಿಕ ಬಂಗಾಳದ 19 ಜಿಲ್ಲೆಗಳ 696 ಬೂತ್‌ಗಳಲ್ಲಿ ರಾಜ್ಯ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಉಳಿದ ಕಡೆ ಶೇ. 69.85 ಮತದಾನವಾಗಿದೆ.
2024ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಭಾರತೀಯ ಜನತಾ ಪಕ್ಷ ಇದನ್ನು ಅಗ್ನಿಪರೀಕ್ಷೆ ಎಂದು ಪರಿಗಣಿಸಿದ್ದು, ಇಂದಿನ ಫಲಿತಾಂಶಕ್ಕೆ ಹೆಚ್ಚು ಮಹತ್ವದ್ದಾಗಿದೆ.