ದುಲೀಪ್ ಟ್ರೋಫಿಗೆ ಪಶ್ಚಿಮ ವಲಯ ತಂಡ ಪ್ರಕಟ: ಶಾರ್ದೂಲ್ ಠಾಕೂರ್ ನೇತೃತ್ವ! ಶ್ರೇಯಸ್ ಅಯ್ಯರ್ ತಂಡಕ್ಕೆ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ದುಲೀಪ್ ಟ್ರೋಫಿಗಾಗಿ ಪಶ್ಚಿಮ ವಲಯ ತಂಡವನ್ನು ಘೋಷಣೆ ಮಾಡಲಾಗಿದೆ. ಈ ಬಾರಿಯ 15 ಸದಸ್ಯರ ತಂಡಕ್ಕೆ ಅನುಭವಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ ನಾಯಕರಾಗಿ ನೇಮಕವಾಗಿದ್ದಾರೆ. ಉಪನಾಯಕನ ಸ್ಥಾನವನ್ನು ಅಭಿಮನ್ಯು ಈಶ್ವರನ್ ಹೊತ್ತಿದ್ದಾರೆ. ಈ ವೇಳೆ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪಶ್ಚಿಮ ವಲಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಒಂದು ಕಾಲದಲ್ಲಿ ಏಕದಿನ ಹಾಗೂ ಟಿ20 ಫಾರ್ಮ್ಯಾಟ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಅಯ್ಯರ್ ಈಗ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಗಮನ ಹರಿಸುತ್ತಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರು ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಅವರೊಂದಿಗೆ ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್‌ ಅವರಂತಹ ಯುವ ಆಟಗಾರರು ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪಶ್ಚಿಮ ವಲಯ ತಂಡದಲ್ಲಿ ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ಅವರು ಸೇರಿದ್ದಾರೆ.

ದುಲೀಪ್ ಟ್ರೋಫಿಯು ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಪ್ರಮುಖ ಟೆಸ್ಟ್ ಮಾದರಿಯ ಟೂರ್ನಿಯಾಗಿ ಪರಿಗಣಿಸಲಾಗುತ್ತದೆ. 1961-62ರಲ್ಲಿ ಆರಂಭವಾದ ಈ ಟೂರ್ನಿಗೆ ರಾಜಕುಮಾರ ದುಲೀಪ್‌ಸಿಂಗ್‌ಜಿ ಅವರ ಹೆಸರನ್ನು ಇಡಲಾಗಿದೆ. ಟೂರ್ನಿಯಲ್ಲಿ ದೇಶದ ಆರು ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಪಾಲ್ಗೊಳ್ಳುತ್ತವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಮತ್ತು ಈಶಾನ್ಯ ವಲಯಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತವೆ. ಪ್ರತಿಯೊಂದು ವಲಯವೂ ತಮ್ಮ ವಲಯದ ರಾಜ್ಯಗಳಿಂದ ಆಟಗಾರರನ್ನು ಆಯ್ಕೆಮಾಡುತ್ತವೆ.

ಈ ಬಾರಿ ಪಶ್ಚಿಮ ವಲಯ ತಂಡದಲ್ಲಿರುವ ಆಟಗಾರರ ಅನುಭವ ಮತ್ತು ಫಾರ್ಮ್ ಗಮನದಲ್ಲಿಟ್ಟರೆ, ಈ ಬಾರಿ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡ ಕಠಿಣ ಪೈಪೋಟಿಗೆ ಸಿದ್ಧವಾಗಿರುವುದು ಸ್ಪಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!