ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೊಂದು ವಿವಾದ ಭುಗಿಲೆದ್ದಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಇದೀಗ ಮಹಿಳಾ ವರದಿಗಾರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಮಹಿಳಾ ವರದಿಗಾರ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಚಾರ್ಜ್ ಶೀಟ್ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದಾಗ ಈ ಘಟನೆ ನಡೆದಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಚಾರ್ಜ್ ಶೀಟ್ ಬಗ್ಗೆ ಪ್ರಶ್ನಿಸಿದ ಮಹಿಳಾ ವರದಿಗಾರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಸಂಚಲನ ಮೂಡಿಸಿತ್ತು. ಈ ಪ್ರಕರಣದ ಆರೋಪಿ ನೀವೇ ಎಂದು ಸಾಬೀತಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಬ್ರಿಜ್ ಭೂಷಣ್ ಮೈಕ್ ಅನ್ನು ನೆಲಕ್ಕೆ ಎಸೆದು ವರದಿಗಾರ್ತಿಯನ್ನು ನಿಂದಿಸಿದದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಕಡೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಬ್ರಿಜ್ ಭೂಷಣ್ ಅವರನ್ನು ಜೈಲಿಗೆ ಹಾಕಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.
ಮಹಿಳಾ ವರದಿಗಾರ್ತಿಯೊಂದಿಗೆ ಬ್ರಿಜ್ ಅವರ ವರ್ತನೆ ಚೆನ್ನಾಗಿಲ್ಲ ಮತ್ತು ಅವರು ಸಂಸತ್ತಿನಲ್ಲಿ ಅಲ್ಲ..ಜೈಲಿನಲ್ಲಿರಬೇಕು ಎಂದು ಸ್ವಾತಿ ಟ್ವೀಟ್ ಮಾಡಿದ್ದಾರೆ. ಬ್ರಿಜ್ ಭೂಷಣ್ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದ್ದಾರೆ. ಜುಲೈ 18 ರಂದು ಹಾಜರಾಗುವಂತೆ ದೆಹಲಿ ನ್ಯಾಯಾಲಯ ಬ್ರಿಜ್ ಭೂಷಣ್ ಅವರಿಗೆ ಸೂಚನೆ ನೀಡಿದೆ. ಯುವಜನ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬ್ರಿಜ್ ಭೂಷಣ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಮಹಿಳಾ ಪತ್ರಕರ್ತರಿಗೆ ಕಿರುಕುಳ ನೀಡಿ ಮೈಕ್ ಒಡೆದಿರುವುದನ್ನು ಶ್ರೀನಿವಾಸ್ ಪ್ರಶ್ನಿಸಿದರು.