Tuesday, December 23, 2025

ಇವನ್ಯಾವ ಸೀಮೆ ಕಳ್ಳ ಸ್ವಾಮಿ..! ರಾತ್ರಿ ಕಣ್ಣು ಕಾಣಲ್ಲ ಅಂತ ಹಗಲಲ್ಲೇ ಕಳ್ಳತನ ಮಾಡ್ತಿದ್ದ: ಆಮೇಲೇನಾಯ್ತು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಗಲು ಹೊತ್ತಿನಲ್ಲಿ ಮನೆಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ತನಗೆ ಇರುಳು ಕುರುಡು ಸಮಸ್ಯೆ ಇದೆ ಎಂದು ಹೇಳಿಕೊಂಡು ರಾತ್ರಿ ಬದಲು ಕಳ್ಳತನಕ್ಕೆ ಹಗಲು ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದ ಆರೋಪಿ ಮೊಹಮ್ಮದ್ ಖಾನ್, ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಮೂಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಂಧಿತನಿಂದ ಸುಮಾರು 65.28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಬೈಕ್‌ನಲ್ಲಿ ನಗರದಲ್ಲಿನ ವಿವಿಧ ವಸತಿ ಪ್ರದೇಶಗಳಲ್ಲಿ ಸುತ್ತಾಡಿ, ಬೀಗ ಹಾಕಿರುವ ಮನೆಗಳನ್ನು ಗಮನಿಸುತ್ತಿದ್ದ. ಮನೆಯವರು ಕೆಲಸಕ್ಕೆ ತೆರಳಿದ ಸಮಯವನ್ನು ಪತ್ತೆಹಚ್ಚಿ, ಕ್ಷಣಾರ್ಧದಲ್ಲಿ ಬೀಗ ಮುರಿದು ಒಳನುಗ್ಗಿ ಆಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದನು. ರಾತ್ರಿ ಸಮಯದಲ್ಲಿ ಸರಿಯಾಗಿ ಕಾಣುವುದಿಲ್ಲ ಎಂಬ ಕಾರಣವನ್ನು ಈತ ಕಳ್ಳತನಕ್ಕೆ ಕಾರಣವಾಗಿ ಬಳಸುತ್ತಿದ್ದ ಎನ್ನುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಜೆ.ಪಿ.ನಗರದಲ್ಲಿ ನಟ ಪ್ರವೀಣ್ ಅವರ ಮನೆಗೆ ಕನ್ನ ಹಾಕಿದ ಬಳಿಕ ನೀಡಿದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿದರು. ವಿಚಾರಣೆಯಲ್ಲಿ ಕರ್ನಾಟಕದ ಜೊತೆಗೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಈತ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ.

error: Content is protected !!