ಒಬ್ಬರೊಡನೆ ಒಳ್ಳೆಯ ಬಾಂಧವ್ಯವನ್ನು ಕಟ್ಟಿಕೊಳ್ಳೋದು, ಅದನ್ನು ಆಳವಾಗಿ ಅರ್ಥಮಾಡಿಕೊಳ್ಳೋದು, ಇವತ್ತಿನ ಡೇಟಿಂಗ್ ಆ್ಯಪ್‌ಗಳ ಯುಗದಲ್ಲಿ ಅಷ್ಟು ಸುಲಭವಿಲ್ಲ. ಇನ್ನೂ, ಯಾರು ನನ್ನ ನಿಜವಾದ ಸೋಲ್ ಮೆಟ್ ಅಂತ ನಿಶ್ಚಯ ಮಾಡೋದು, ಎಲ್ಲಿ ಎಚ್ಚರಿಕೆ ವಹಿಸಬೇಕು ಅನ್ನೋದನ್ನ ತೀರ್ಮಾನಿಸೋದು ಹೊಸ ಜನಾಂಗಕ್ಕೆ ತುಂಬಾ ಗೊಂದಲದ ವಿಷಯ.
ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳೋದು, ಭಾವನಾತ್ಮಕವಾಗಿ ಸ್ವಸ್ಥವಾಗಿ ಸಂಬಂಧಗಳನ್ನು ನಿರ್ವಹಿಸೋದು ಕಲಿಯೋಕೆ ದೆಹಲಿ ಯುನಿವರ್ಸಿಟಿ ಚಂದದ ಹೊಸ ಐಚ್ಛಿಕ ಕೋರ್ಸ್ ಪ್ರಾರಂಭ ಮಾಡ್ತಿದೆ — “Negotiating Intimate Relationships” ಅನ್ನೋದು.
ಹೆಸರೇ ಚೆನ್ನಾಗಿ ಕಾಣಿಸುತ್ತಿದೆ ಅಲ್ಲವೇ? ಈ ಕೋರ್ಸ್‌ನಲ್ಲಿ ನಿಜಜೀವನದ ಸಂಬಂಧಗಳ ಬಗ್ಗೆ ಬರೀ ಪುಸ್ತಕದ ಮಾತುಗಳಲ್ಲ, ನಿಜವಾದ ಅನುಭವಗಳನ್ನು, ಚರ್ಚೆಗಳನ್ನು, ಚಲನಚಿತ್ರ ವಿಶ್ಲೇಷಣೆಗಳ ಮೂಲಕ ಕಲಿಯೋ ಅವಕಾಶ ಇರುತ್ತೆ. ಈ ಕೋರ್ಸ್ 2025–26ರ ಶೈಕ್ಷಣಿಕ ಅವಧಿಯಿಂದ ಆರಂಭವಾಗುತ್ತಿದ್ದು, ಎಲ್ಲ ಪದವಿಪೂರ್ವ ವಿದ್ಯಾರ್ಥಿಗಳಿಗೆ ಓಪನ್ ಆಗಿರುತ್ತದೆ. 12ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಗಳು ಈ ನಾಲ್ಕು ಕ್ರೆಡಿಟ್‌ನ ಕೋರ್ಸ್‌ಗೆ ಅರ್ಹರಾಗಿರುತ್ತಾರೆ.
ಈ ಕೋರ್ಸ್‌ನಲ್ಲಿ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ಮನೋವಿಜ್ಞಾನ: ಮಾನವ ಸಂಬಂಧಗಳ ಹಿಂದಿರುವ ಭಾವೋದ್ರೇಕ, ಆಸಕ್ತಿ ಮತ್ತು ನಿಕಟತೆ ಹೇಗೆ ಬೆಳೆಯುತ್ತವೆ ಎಂಬುದರ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅರ್ಥವನ್ನು ಪರಿಚಯಿಸುತ್ತದೆ.
ಪ್ರೇಮ ಮತ್ತು ಲೈಂಗಿಕತೆಯ ಸಿದ್ಧಾಂತಗಳು: ರಾಬರ್ಟ್ ಸ್ಟರ್ನ್‌ಬರ್ಗ್ ಅವರ ಪ್ರೀತಿಯ ತ್ರಿಕೋನ ಸಿದ್ಧಾಂತದಂತೆ ಬೇರೆ ಬೇರೆ ಪ್ರೀತಿ ಮಾದರಿಗಳನ್ನು ವಿವರಿಸಿ, ವಿದ್ಯಾರ್ಥಿಗಳು ತಮ್ಮ ಸಂಬಂಧಗಳನ್ನೇ ಪುನರ್‌ಪರಿಶೀಲನೆ ಮಾಡಿಕೊಳ್ಳುವಂತೆ ಮಾಡುತ್ತದೆ.
Red Flags ಗುರುತಿಸುವುದರ ಮಹತ್ವ: ಅಸೂಯೆ, ಭಾವನಾತ್ಮಕ ಹಿಂಸೆ, ನಿರ್ಲಕ್ಷ್ಯ ಮುಂತಾದ ಅಂಶಗಳನ್ನು ಹೇಗೆ ಗುರುತಿಸಬೇಕು, ಇದರಿಂದ ಎಷ್ಟು ಎಚ್ಚರವಾಗಬೇಕು ಎಂಬುದರ ಕುರಿತು ಚರ್ಚೆ.
ಆರೋಗ್ಯಕರ ಸಂಬಂಧ ಬೆಳೆಸುವ ತಂತ್ರಗಳು: ಸಂವಹನ, ಗೌರವ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಂಘರ್ಷ ನಿರ್ವಹಣೆಗೆ ಅಗತ್ಯವಾದ ತಂತ್ರಗಳನ್ನು ಕಲಿಸಲಾಗುತ್ತದೆ.
ಪಠ್ಯಕ್ರಮದ ವೈಶಿಷ್ಟ್ಯಗಳು:
ವಾರಕ್ಕೆ ಮೂರು ಲೆಕ್ಚರ್, ಒಂದು ಟ್ಯುಟೋರಿಯಲ್, ಚಲನಚಿತ್ರ ವಿಶ್ಲೇಷಣೆ (ಕಬೀರ್ ಸಿಂಗ್, ಟೈಟಾನಿಕ್ ಮುಂತಾದವುಗಳು), ಸಮಕಾಲೀನ ಡೇಟಿಂಗ್ ಸಂಸ್ಕೃತಿಯ ಕುರಿತು ಚರ್ಚೆಗಳು. ತಾತ್ವಿಕ ಹಾಗೂ ಅನ್ವಯಿಕ ಅಧ್ಯಯನ, ವ್ಯಕ್ತಿಗತ ಪ್ರೇಮಾನುಭವಗಳ ಬಗ್ಗೆ ಒಳನೋಟ ಪಡೆಯಲು ಬೌದ್ಧಿಕ ಸಾಧನೆ.
ಯಾಕೆ ಈ ಕೋರ್ಸ್ ಈಗ ಅಗತ್ಯ?
ಯುವಜನತೆಯ ಭಾವನಾತ್ಮಕ ನೆಲೆಯು ಹೆಚ್ಚು ದುರ್ಬಲವಾಗುತ್ತಿರುವ ಸದ್ಯದ ಕಾಲಘಟ್ಟದಲ್ಲಿ, ಈ ತರಹದ ಶೈಕ್ಷಣಿಕ ಹಸ್ತಕ್ಷೇಪಗಳು ಬಹುಮಟ್ಟಿಗೆ ಉಪಯುಕ್ತ. ಜಾಗತಿಕ ಮಟ್ಟದಲ್ಲಿಯೂ ಟಿನ್‌ಏಜ್ ಮತ್ತು ಯಂಗ್ ಅಡಲ್ಟ್ಸ್ ನಡುವೆ ಪರಸ್ಪರ ಹಿಂಸಾಚಾರ, ಭಾವನಾತ್ಮಕ ಅವಲಂಬನೆ, ಅನಾರೋಗ್ಯಕರ ಸಂಬಂಧಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕೋರ್ಸ್ ಹೆಚ್ಚು ಪ್ರಸ್ತುತವಾಗಿದೆ ಎಂದು ದೆಹಲಿ ಯುನಿವರ್ಸಿಟಿ ತಿಳಿಸಿದೆ.
ಕೋರ್ಸ್ ಮುಗಿಯುವ ಹೊತ್ತಿಗೆ, ವಿದ್ಯಾರ್ಥಿಗಳು ಸಂಬಂಧಗಳ ಗಂಭೀರತೆಗೆ ಅರ್ಥವೊಂದನ್ನು ನೀಡುವಷ್ಟರ ಮಟ್ಟಿಗೆ ಒಳನೋಟ, ಸಂವೇದನೆ ಮತ್ತು ಸಾಮರ್ಥ್ಯ ಹೊಂದಿರುತ್ತಾರೆ ಎಂಬುದೇ ದೆಹಲಿ ಯುನಿವರ್ಸಿಟಿನ ಆಶಯ.