ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಯಾವ ಸಾಧನೆ ಮಾಡಿದೆ ಎಂಬ ಕಾರಣ ಸಮಾವೇಶ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವ ಪುರುರ್ಷಾತಕ್ಕೆ ಈ ಸಮಾವೇಶ ಎಂದು ಸಂಸದ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಮೇ ೨೦ ರಂದು ವಿಜಯನಗರದಲ್ಲಿ ಸಮಾವೇಶ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನ ಸಾಮಾನ್ಯರು ನಿಮ್ಮನ್ನು ಒಪ್ಪುತ್ತಿಲ್ಲ. ಅವರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ. ಹವಾ ಮಾಡುವ ಸಲುವಾಗಿ ಸಮಾವೇಶ ಮಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಲೆಕ್ಕಾಚಾರ ಮಾಡದಷ್ಟು ಭ್ರಷ್ಟಾಚಾರ ಮೀತಿ ಮೀರಿದೆ. ಸರ್ಕಾರಿ ಕಚೇರಿಯಲ್ಲಿ ಹಣ ನೀಡದೆ ಯಾವುದೇ ಕೆಲಸ ಆಗುತ್ತಿಲ್ಲ. ಗುತ್ತಿಗೆದಾರರ ಬಿಲ್ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ಶ್ಯೂನ್ಯವಾಗಿದೆ. ಗ್ಯಾರಂಟಿಯಿಂದ ಯಾರಿಗೆ ಲಾಭವಾಗಿದೆ? ಎಂದು ಪ್ರಶ್ನಿಸಿದರು.