ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮೇಲೆ ಕರ್ನಾಟಕ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಬಗ್ಗೆ ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಗಳ ತನಕ, ಅನ್ನದಾತರಿಂದ ವ್ಯಾಪಾರಿಗಳ ತನಕ, ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಂದ ಹಿಡಿದು ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸುವ ರೈಲ್ವೇ ಪ್ರಯಾಣಿಕರ ತನಕ ಅಪಾರ ನಿರೀಕ್ಷೆ ಇದೆ.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಯಾಕಂದರೆ ಕರ್ನಾಟಕದ ವಿ.ಸೋಮಣ್ಣ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದಾರೆ. ಸೋಮಣ್ಣ, ಕಳೆದ ವಾರ ದಕ್ಷಿಣ ಕನ್ನಡ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜಿಲ್ಲೆಗೆ ಸಂಬಂಧಿಸಿದ ರೈಲು ಯೋಜನೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.
ಬಳಿಕ ಬೆಳ್ತಂಗಡಿಯಲ್ಲಿ ಮಾತನಾಡಿದ್ದ ವಿ.ಸೋಮಣ್ಣ, ಕೊಲ್ಲೂರು- ಧರ್ಮಸ್ಥಳ- ಕುಕ್ಕೆಗೆ ಸಂಪರ್ಕ ಬೆಸೆಯುವ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತದೆ ಎಂದಿದ್ದರು. ಹೀಗಾಗಿ ಈ ಯೋಜನೆಗೆ ಈ ಬಾರಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.
ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದ ವರ್ತುಲ ರೈಲು ಯೋಜನೆ ನೀಲನಕ್ಷೆ ತಯಾರಿಸಲಾಗಿದೆ. 287 ಕಿ.ಮೀ. ಉದ್ದದ ಈ ರೈಲು ಯೋಜನೆ,ನಿಡುವಂದ-ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡುವಂದ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಪ್ರಮುಖ ರೇಲ್ವೇ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗೆ 23,000 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜು ಇದೆ. ಕೇಂದ್ರ ಬಜೆಟ್‌ನಲ್ಲಿ ಅನುದಾನವನ್ನು ನೀಡುವ ನಿರೀಕ್ಷೆ ಇದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ ನೀಡಲು ಅಗತ್ಯ ಅನುದಾನ. ಬೆಂಗಳೂರು- ಮೀರಜ್ ಮಾರ್ಗ ವಿದ್ಯುದೀಕರಣದ ನಿರೀಕ್ಷೆ.ಇದೇ ರೀತಿ ರಾಜ್ಯದ ಹಲವು ರೈಲು ಮಾರ್ಗಗಳ ವಿದ್ಯುದೀಕರಣ. ತುಮಕೂರಿನಿಂದ-ಚಿತ್ರದುರ್ಗಕ್ಕೆ ನೇರ ರೈಲು ಸಂಪರ್ಕ ಯೋಜನೆ. ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ. ಗದಗದಿಂದ ಕಲಬುರಗಿಯ ವಾಡಿ ತನಕ ಹೊಸ ಮಾರ್ಗ ನಿರ್ಮಾಣ. ರೈಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಕ್ತ ಅನುದಾನ.