ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯುತ್ತಿದೆ. ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಗಿರುವ ಕಾರಣ ಈ ಪಂದ್ಯಕ್ಕೆ ಪಿಂಕ್ ಬಾಲ್ ಬಳಸಲಾಗುತ್ತಿದೆ.
ಇನ್ನು ಭಾರತ ತಂಡವು ಪ್ರಸ್ತುತ 5-ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕಾರಣ ಈಗ ಆ ಮುನ್ನಡೆಯನ್ನು 2-0 ಗೆ ಹೆಚ್ಚಿಸಲು ನೋಡುತ್ತಿದೆ. ಇತ್ತ ಆತಿಥೇಯ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಎದುರು ನೋಡುತ್ತಿದೆ.
ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇದರ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಈ ಮೊದಲು ನಿರೀಕ್ಷಿಸಿದಂತೆ ಪಿಂಕ್ ಬಾಲ್ ಟೆಸ್ಟ್‌ಗೆ ಭಾರತ ತಂಡದಲ್ಲಿ ಬದಲಾವಣೆಗಳಿವೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೇಲ್ ತಂಡದಿಂದ ಹೊರಬಿದ್ದಿದ್ದಾರೆ.
ರೋಹಿತ್ ತನ್ನ ಎರಡನೇ ಮಗುವಿನ ಜನನದ ಕಾರಣ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರೆ, ಗಿಲ್ ಬೆರಳಿನ ಗಾಯದಿಂದಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಈ ಇಬ್ಬರು ತಂಡವನ್ನು ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಉಳಿದಂತೆ ಭಾರತ ತಂಡದ ಸ್ಪಿನ್ ವಿಭಾಗದಲ್ಲಿ ಮೂರನೇ ಬದಲಾವಣೆಯಾಗಿದ್ದು, ವಾಷಿಂಗ್ಟನ್ ಸುಂದರ್ ಬದಲಿಗೆ ಅಶ್ವಿನ್ ಸ್ಥಾನ ಪಡೆದಿದ್ದಾರೆ.