April 5, 2026
Sunday, April 5, 2026
spot_img

ಗಿಲ್ ಫಿಟ್ನೆಸ್ ಬಗ್ಗೆ ಪಾರ್ಥಿವ್ ಪಟೇಲ್ ಹೇಳಿದ್ದೇನು? ಫ್ಯಾನ್ಸ್‌ಗೆ ಸಿಕ್ತು ಬಿಗ್ ಅಪ್‌ಡೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಈಗ ನಾಯಕ ಶುಭಮನ್ ಗಿಲ್ ಅವರ ಫಿಟ್ನೆಸ್ ಚಿಂತೆ ಆರಂಭವಾಗಿದೆ. ಸ್ನಾಯು ಸೆಳೆತದಿಂದಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಗಿಲ್, ಈ ಸೀಸನ್‌ನಿಂದಲೇ ಹೊರಬೀಳುತ್ತಾರಾ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.

ಶನಿವಾರ ನಡೆದ ಪಂದ್ಯದಲ್ಲಿ ರಶೀದ್ ಖಾನ್ ತಂಡವನ್ನು ಮುನ್ನಡೆಸಿದ್ದರು. ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಸಿಕ್ಕರೂ, ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಗುಜರಾತ್ 6 ರನ್‌ಗಳ ಅಂತರದ ವಿರೋಚಿತ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ರಶೀದ್ ಖಾನ್, “ಗಿಲ್ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದರಿಂದ ವಿಶ್ರಾಂತಿ ನೀಡಲಾಗಿತ್ತು. ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ,” ಎಂದು ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಮಾಧಾನದ ಸುದ್ದಿ ನೀಡಿದ್ದಾರೆ.

ತಂಡದ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಕೂಡ ಗಿಲ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಕಳೆದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಗಿಲ್ ಕುತ್ತಿಗೆ ಉಳುಕಿಸಿಕೊಂಡಿದ್ದರು. ಐಪಿಎಲ್ ಆರಂಭಕ್ಕೂ ಮುನ್ನವೂ ಈ ಸಮಸ್ಯೆ ಕಾಡಿತ್ತು. ಆದರೆ ಪ್ರಸ್ತುತ ಗಾಯವು ಅಷ್ಟೊಂದು ಗಂಭೀರವಾಗಿಲ್ಲ. ಏಪ್ರಿಲ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದ ವೇಳೆಗೆ ಗಿಲ್ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !