ಚಂಡಮಾರುತಕ್ಕೆ ಅಬ್ಬರಕ್ಕೆ ರಾಜ್ಯ ತತ್ತರ, ಚಂಡಮಾರುತ ಸೃಷ್ಟಿಸಿದ ಅವಾಂತರಕ್ಕೆ ಬದುಕುಗಳು ನಾಶ, ರಾಜ್ಯಕ್ಕೆ ಅಪ್ಪಳಿಸಿದ ಚಂಡಮಾರುತ.. ಹೀಗೆ ಹತ್ತಾರು ಹೆಡ್ಲೈನ್ಗಳನ್ನು ಎಲ್ಲರೂ ಓದಿಯೇ ಇರ್ತೀರಿ. ಅಸಲಿಗೆ ಚಂಡಮಾರುತ ಅಂದ್ರೇನು? ಅದು ಹೇಗೆ ಸೃಷ್ಟಿಯಾಗುತ್ತದೆ? ಅದಕ್ಕೆ ಹೆಸರನ್ನು ಯಾರು ಇಡ್ತಾರೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ..
ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆಯನ್ನು ಚಂಡಮಾರುತ ಎಂದು ಕರೆಯಲಾಗುತ್ತದೆ.
ಭೂಮಿ ತಿರುಗುವ ದಿಕ್ಕಿನಲ್ಲೇ ಇದು ಸುತ್ತುತ್ತದೆ.ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ. ದಕ್ಷಿಣ ಗೋಳದಲ್ಲಿ ಚಂಡಮಾರುತ ಗಡಿಯಾರದ ದಿಕ್ಕಿನಲ್ಲಿ ಸುತ್ತುತ್ತದೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳೇಳುತ್ತವೆ.
ಗೀತಾ ಚಂಡಮಾರುತ, ಜೋಸಿ ಚಂಡಮಾರುತ, ಈಗ ಅಬ್ಬರಿಸುತ್ತಿರುವ ಫೆಂಗಲ್ ಚಂಡಮಾರುತ, ಐರಿನ್,ಸ್ಯಾಂಡಿ, ಜೆನಾ, ಅಮೋಸ್, ಮೀನಾ, ನೀಲ್.. ಹೀಗೆ ಚಂಡಮಾರುತಕ್ಕೆ ನೂರಾರು ಹೆಸರುಗಳಿವೆ. ಚಂಡಮಾರುತಗಳ ನಾಮಕರಣ ಯಾರು ಮಾಡ್ತಾರೆ. ಹೇಗೆ ಮಾಡ್ತಾರೆ?
ಜಿನೀವಾದಲ್ಲಿರುವ ವಿಶ್ವ ಹವಾಮಾನ ಸಂಘಟನೆಯು (WMO) ಪ್ರತಿ ವರ್ಷ ಅನುಕ್ರಮವಾಗಿ (Alphabetical ) 21 ಹೆಸರುಗಳನ್ನು ಪಟ್ಟಿ ಮಾಡುತ್ತದೆ. 1971ರಿಂದೀಚೆಗೆ, ಆ ಹೆಸರುಗಳನ್ನು , ಲಿಂಗಾನುಕ್ರಮಣಿಕೆಗೆ ಆನುಸಾರವಾಗಿ (ಒಮ್ಮೆ ಪುಲ್ಲಿಂಗ, ಇನ್ನೊಮ್ಮೆ ಸ್ತ್ರೀಲಿಂಗ ) ಕರೆಯಲಾಗುತ್ತದೆ.
ಆದರೆ ಈ ಪಟ್ಟಿಯಿಂದ ಇಂಗ್ಲಿಷ್ ವರ್ಣಮಾಲೆಯ ‘Q’, ‘U’, ‘X ‘, ‘Y ‘, ‘Z’ ಅಕ್ಷರಗಳನ್ನು ಕೈಬಿಡಲಾಗಿದೆ. ಈ ಐದು ಅಕ್ಷರಗಳನ್ನು ಬಿಟ್ಟು ಉಳಿದಿರುವ 21 ಅಕ್ಷರಗಳಿಂದ, ವಿಭಿನ್ನ/ ವಿಶೇಷವೆನ್ನಿಸುವ, ಚಿಕ್ಕದಾದ, ನೆನಪಿಡಲು ಹಾಗೂ ಉಚ್ಚಾರ ಮಾಡಲು ಸುಲಭವೆನ್ನಿಸುವ ಹೆಸರುಗಳಿಂದ ಕರೆಯಲಾಗುತ್ತದೆ. ಭಾರತ ಅಗ್ನಿ, ಆಕಾಶ್, ಬಿಜ್ಲಿ, ಜಲ್ ಎನ್ನುವ ಹೆಸರುಗಳನ್ನು ಸೂಚಿಸಿದೆ.