ದಿನದಿಂದ ದಿನಕ್ಕೆ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಹಿರಿಯರು, ಯುವಕರು ಎಂಬ ಬೇಧವಿಲ್ಲದೆ ಎಲ್ಲರೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಇತ್ತೀಚಿನ ವೈದ್ಯಕೀಯ ಅಧ್ಯಯನಗಳ ಪ್ರಕಾರ, ಕೇವಲ 20–30 ನಿಮಿಷಗಳು ನಡಿಗೆಯ ಅಭ್ಯಾಸದಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ.
ಅಧ್ಯಯನಗಳ ಪ್ರಕಾರ, ದಿನವೂ ಆಗಾಗ್ಗೆ ವೇಗವಾಗಿ ನಡೆಯುವುದು ದೀರ್ಘಕಾಲದ ಆರೋಗ್ಯಕ್ಕೆ ಅನುಕೂಲವಾಗಿದೆ. 2023ರಲ್ಲಿ ನಡೆದ ಮೆಟಾ ವಿಶ್ಲೇಷಣಾ ಅಧ್ಯಯನವು, ದಿನಕ್ಕೆ ಕನಿಷ್ಠ 20 ನಿಮಿಷಗಳು ವೇಗವಾಗಿ ನಡೆದರೆ, ಹೃದಯಾಘಾತ, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳ ಅಪಾಯ ಬಹಳಷ್ಟು ಕಡಿಮೆಯಾಗುತ್ತಿದೆ ಎಂದು ನಿರ್ಧರಿಸಿದೆ. ಅಲ್ಲದೆ, ವೇಗದ ನಡಿಗೆ ಮಾನಸಿಕ ಆರೋಗ್ಯಕ್ಕೂ ಸಹಕಾರಿ ಎನಿಸಿದೆ.
ಈ ನಡಿಗೆಯ ಅಭ್ಯಾಸವು ಕೇವಲ ಹೃದಯಕ್ಕೆ ಮಾತ್ರವಲ್ಲದೆ ಮೆದುಳಿನ ಆರೋಗ್ಯ, ಮನಸ್ಥಿತಿಯ ಸುಧಾರಣೆ, ಜ್ಞಾಪಕಶಕ್ತಿ ಹಾಗೂ ಜೀರ್ಣಕ್ರಿಯಾ ವ್ಯವಸ್ಥೆಗೂ ಸಹಾಯ ಮಾಡುತ್ತದೆ. ನಡಿಗೆಯ ಮೂಲಕ ಕಾರ್ಟಿಸೋಲ್ ಎಂಬ ಮನೋವೈಕಲ್ಯ ಹಾರ್ಮೋನ್‌ನ ಮಟ್ಟ ತಗ್ಗಿಸುತ್ತದೆ, ಮನಸ್ಸಿಗೆ ಸಮಾಧಾನ ನೀಡುತ್ತದೆ. ಈ ಮೂಲಕ ಖಿನ್ನತೆ ಮತ್ತು ಆತಂಕದ ಮಟ್ಟವೂ ಕಡಿಮೆಯಾಗುತ್ತದೆ.
ಅಧಿಕ ವೇಗದ ನಡಿಗೆ ದೇಹದೊಳಗಿನ ರಕ್ತ ಸಂಚಾರವನ್ನು ಸುಧಾರಿಸಿ, ಹೃದಯದ ಬಡಿತವನ್ನೂ ನಿಯಂತ್ರಿಸುತ್ತದೆ. ತಜ್ಞರ ಅಭಿಪ್ರಾಯದಂತೆ, ದೀರ್ಘಾಯುಷ್ಯಕ್ಕಾಗಿ ಜಿಮ್ ಅಥವಾ ದುಬಾರಿ ವ್ಯಾಯಾಮ ಉಪಕರಣಗಳ ಅಗತ್ಯವಿಲ್ಲ, ದಿನನಿತ್ಯದ ಸರಳ ನಡಿಗೆ ಸಾಕು.
ಹೀಗಾಗಿ, ಇಂದು ನಡಿಗೆಯ ಮಹತ್ವವನ್ನು ಅರ್ಥಮಾಡಿಕೊಂಡು ದಿನಕ್ಕೆ ಕನಿಷ್ಠ 20 ನಿಮಿಷವಾದರೂ ನಡಿಗೆ ಮಾಡುವುದು ಅತೀ ಮುಖ್ಯವಾಗಿದೆ. ಇದು ದೀರ್ಘಕಾಲದ ಆರೋಗ್ಯವನ್ನು ಕಾಪಾಡುವುದರಲ್ಲಿ ಸಹಾಯಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.