ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರದ ಕಾರಣ ಬಾಂಗ್ಲಾ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಲ್ಲಿ (IPL) ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ಅಸಾಮಾಧಾನ ಸ್ಫೋಟಗೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಜನ ಛೀಮಾರಿ ಹಾಕುತ್ತಿದ್ದಾರೆ.
ಇದೆಲ್ಲದರ ನಡುವೆ ಬಿಸಿಸಿಐ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೆನೆಂದರೆ, ಏಕದಿನ ಹಾಗೂ ಟಿ20 ಸರಣಿಗಾಗಿ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಇಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ.
ಈ ಪ್ರವಾಸದ ಬಗ್ಗೆ ಖಚಿತ ಮಾಹಿತಿ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಟ್ಟು 6 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಭಾರತದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ. ಹಾಗೆಯೇ ಟಿ20 ಸರಣಿಯೊಂದಿಗೆ ಅಂತ್ಯವಾಗಲಿದೆ.
ಆದಾಗ್ಯೂ ಟೀಂ ಇಂಡಿಯಾದ ಈ ಪ್ರವಾಸಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ. ವೇಳಾಪಟ್ಟಿಯ ಪ್ರಕಾರ ಎರಡು ತಂಡಗಳ ನಡುವೆ ಮೊದಲು ಏಕದಿನ ಸರಣಿ ನಡೆಯಲಿದ್ದು, ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 1 ರಂದು ನಡೆಯಲಿದೆ. ಆ ಬಳಿಕ ಎರಡನೇ ಪಂದ್ಯ ಸೆಪ್ಟೆಂಬರ್ 3 ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 6 ರಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13 ರಂದು ನಡೆಯಲಿವೆ.
ಭಾರತ ತಂಡವು ಕೊನೆಯ ಬಾರಿಗೆ 2022-23 ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು, ಅಲ್ಲಿ ಏಕದಿನ ಸರಣಿಯನ್ನು ಸೋತಿತ್ತು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು.

