ಹೊಸದಿಗಂತ ವರದಿ,ಚಿತ್ರದುರ್ಗ:
ನಾವು ಯುದ್ಧಕ್ಕೆ ಹೋದ ಮೇಲೆ ತಾರ್ಕಿಕ ಅಂತ್ಯ ಸಿಗಬೇಕು. ಅದನ್ನೆಲ್ಲಾ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕು.ಅಮೆರಿಕಾ ಹೇಳಿದ ಕೂಡಲೇ ನಾವು ಯುದ್ಧ ನಿಲ್ಲಿಸಿದರೆ ಹೇಗೆ? ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರಶ್ನಿಸಿದರು.
ಚಿತ್ರದುರ್ಗಕ್ಕೆ ನಗರಕ್ಕೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಭಾರತ-ಪಾಕ್ ಯುದ್ಧ ವಿರಾಮ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯುದ್ಧದಿಂದ ನಮ್ಮ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ? ಇದು ಭಾರತದ ನಾಗರೀಕರ ಎಲ್ಲರ ಮನಸ್ಸಿನಲ್ಲಿಯೂ ಉದ್ಭವವಾಗುವ ಪ್ರಶ್ನೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕಿದೆ ಎಂದರು.
ಭಾರತ-ಪಾಕ್ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲಿ ಒಂದು ಪ್ರಶ್ನೆ ತಲೆಯೆತ್ತಿದೆ. ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿ ಯುದ್ಧ ಮಾಡಬೇಕು. ಆರಂಭ ಮಾಡಿದ ಮೇಲೆ ಅವರಿಗೆ ಪಾಠ ಕಲಿಸಬೇಕಾಗಿರುವುದು ನಮ್ಮ ಗುರಿ. ಆದರೆ ನಿಜವಾಗಿಯೂ ಅವರಿಗೆ ಪಾಠ ಕಳಿಸಿದ್ದೀವಾ ಎಂಬುದು ನನ್ನ ಪ್ರಶ್ನೆ. ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಅವರಿಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ತೀವಿ. ಪಾಕಿಸ್ತಾನ ನಮ್ಮ ಆಂತರಿಕ ವಿಚಾರದಲ್ಲಿ ತಲೆ ಹಾಕುವ ದುಸ್ಸಾಹಸ ಮಾಡದಂತಹ ಪಾಠ ಕಲಿಸಬೇಕಿತ್ತು ಎಂದು ಹೇಳಿದರು.
೧೯೭೧ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಇದೇರೀತಿ ತೊಂದರೆ ಕೊಟ್ಟಿತ್ತು. ಅಂದು ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದಲ್ಲದೇ, ಪಾಕಿಸ್ತಾನವನ್ನೇ ಇಬ್ಭ್ಬಾಗ ಮಾಡಿದ್ದರು. ಬಳಿಕ ಸಾವಿರಾರು ಸೈನಿಕರು ಶರಣಾಗಿದ್ದರು. ಪಾಕಿಸ್ತಾನ ನಾವು ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಇಂದಿರಾಗಾಂಧಿ ಯುದ್ಧ ಮಾಡಿದ್ದರು. ಕಾಶ್ಮೀರ ನಮ್ಮ ಆಂತರಿಕ ವಿಷಯ ಎಂದು ಪಾಕಿಸ್ತಾನವು ಒಪ್ಪಿಕೊಂಡಿದೆ. ಆದರೆ ಅಮೇರಿಕ ಈಗ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ? ಹಾಗಾದ್ರೆ ನಾವು ಇಷ್ಟು ದಿನ ತೆಗೆದುಕೊಂಡ ನಿಲುವು ಏನಾಯ್ತು?ಕಾಶ್ಮೀರ ಭಾರತದ ಆಂತರಿಕ ವಿಷಯವೇ? ಅಥವಾ ಅಂತರಾಷ್ಟ್ರೀಯ ವಿಷಯವೇ? ಈಗ ನಾವೇ ಎಲ್ಲೋ ಒಂದು ಕಡೆ ಇದನ್ನು ಅಂತರಾಷ್ಟ್ರೀಯ ವಿಷಯ ಮಾಡ್ತಿದ್ದೀವಾ? ಅಂತರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ ಅವಕಾಶ ಮಾಡಿಕೊಟ್ಟಂತಾಗಿದೆ. ಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತಾಡಬಹುದು. ಉಪದೇಶ ಕೊಡಬಹುದು. ಇದರಿಂದ ನಮಗೆ ನಷ್ಟವೇ ಆಗಲಿದೆ ಎಂದ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ನಾವು ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗ. ಬೇರೆ ದೇಶದವರು ಮಧ್ಯಸ್ಥಿಕೆ ವಹಿಸುವುದು ಇನ್ನೊಂದು ಭಾಗ. ಟ್ರಂಪ್ ಹೇಳಿದ ಕೂಡಲೇ ನಾವು ಮಂಡಿ ಊರಿದಾಗ ನಮ್ಮ ಸಾರ್ವಭೌಮ ಏನಾಯ್ತು? ಅವರೇನು ಹೆಡ್ ಮಾಸ್ಟ್ರಾ? ನಾವು ಸ್ಕೂಲ್ ಮಕ್ಕಳಾ? ಅವರು ಹೇಳಿದ ಕೂಡಲೇ ನಾವು ಎಸ್ ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು ಎಂದರು.
ಅಮೆರಿಕ ದೊಡ್ಡಣ್ಣ ಹೇಳಿದ ಕೂಡಲೇ ಜಿ ಹೂಜೂರ್ ಎಂಬುವುದು ಎಷ್ಟು ಸರಿ. ಅವರು ಕಾಶ್ಮೀರ ಮೀಡಿಯಷನ್ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಹಾಗಾದ್ರೆ ಅದು ಕಾಶ್ಮೀರ ಇಂಟರ್ನ್ಯಾಷನಲ್ ವಿಷಯವಾದರೆ ಹೇಗೆ? ನಾವಾಗಿಯೇ ಇದು ಆಂತರಿಕ ವಿಷಯ ನಿಮಗೆ ಯಾರಿಗೂ ಸಂಬಂಧವಿಲ್ಲ ಎಂದು ಹೇಳಿದ್ದೇವೆ. ಈಗ ನಾವೇ ಅಂತಾರಾಷ್ಟ್ರೀಯ ವಿಚಾರವಾಗಿ ಚರ್ಚೆ ಮಾಡುವುದಾದರೆ, ನಮ್ಮ ಸಾರ್ವಭೌಮ ಏನಾಯ್ತು ಇವೆಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉತ್ತರಿಸಬೇಕಿದೆ ಎಂದು ಕೃಷ್ಣ ಭೈರೇಗೌಡ ಒತ್ತಾಯಿಸಿದರು.