ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕನ್ನಡ ಮೇಷ್ಟ್ರಾಗಿ ಮಕ್ಕಳಿಗೆ ಒಂದಷ್ಟು ಪಾಠ ಮಾಡಿದ್ದಾರೆ.
ದಿನನಿತ್ಯದ ಬ್ಯುಸಿ ಚಟುವಟಿಕೆಗಳ ಮಧ್ಯೆಯೇ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಮಕ್ಕಳಿಗೆ ಕನ್ನಡ ವ್ಯಾಕರಣದ ಪಾಠ ಮಾಡಿದರು.
ಸುಮಾರು 250 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢಿರ್ ಭೇಟಿ ನೀಡಿದ ಅವರು ಮೊದಲು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ, ಪಠ್ಯಪುಸ್ತಕ, ಬಾತ್ ರೂಮ್ ಕಿಟ್ಗಳ ಸಮರ್ಪ ವಿತರಣೆ ಆಗುತ್ತಿದೆ ಎಂದು ಮಕ್ಕಳು ಸಿಎಂಗೆ ತಿಳಿಸಿದರು. ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದರು. ಮಕ್ಕಳು ಕೂಡ ಉತ್ಸಾಹದಿಂದ, ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿರುತ್ತದೆ, ಆಗಾಗ ಪಲಾವ್ ಕೂಡ ಕೊಡುತ್ತಾರೆ ಎಂದು ವಿವರಿಸಿದರು.
ಬಳಿಕ ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ ಮಾಡಿದರು. ಸಂದಿ ಎಂದರೇನು? ಸಂದಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳು ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.
ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನೆ ಕೇಳಿದರು. ನೀವೇ ಆರಂಭಿಸಿದ್ದು ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95ರಲ್ಲಿ ಆರಂಭಿಸಿದ್ದಾಗಿ ಸಿಎಂ ಹೇಳಿದರು. ಆಗ ಮಕ್ಕಳು ಚಪ್ಪಾಳೆ ತಟ್ಟಿದರು.
ಇದೇ ವೇಳೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಹಲವರು ಸಿಎಂಗೆ ಸಾಥ್ ನೀಡಿದರು.