ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆಯಲ್ಲಿ ಟಿಕೆಟ್ ಗಾಗಿ ಬಹಿರಂಗ ಸಮರ ನಡೆಯುತ್ತಿದ್ದು,ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಒತ್ತಾಯಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಇಂದು ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ, ‘ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂದು ನಮ್ಮ ತಂದೆಯವರು (ಶಾಮನೂರು ಶಿವಶಂಕರಪ್ಪ) ಯಾರ ಬಳಿ ಹೇಳಿದ್ದಾರೆ? ಬರಿ ಅಬ್ದುಲ್ ಜಬ್ಬಾರ್‌ಗೆ ಅಷ್ಟೇ ನಮ್ಮ ತಂದೆಯವರು ಈ ಮಾತು ಹೇಳಿದ್ದಾರಾ? ನಾವೆಲ್ಲಾ ಒಂದೇ ಕುಟುಂಬದವರಂತೆ ಇದ್ದೇವೆ, ಏನಿದ್ದರೂ ಕೂತು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಜಮೀರ್ ಅಹಮದ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ, ‘ಜಮೀರ್ ಅಲ್ಲಿಂದ ಇಲ್ಲಿಗೆ ಬಂದು ಮಾತನಾಡುವ ಅವಶ್ಯಕತೆ ಏನಿದೆ? ಅವನ ಮಾತುಗಳಿಂದಲೇ ಈ ಎಲ್ಲಾ ಗೊಂದಲಗಳು ಸೃಷ್ಟಿಯಾಗಿವೆ. ಅವನಿಗೆ ಏನಾದರೂ ಹೇಳುವುದಿದ್ದರೆ ನೇರವಾಗಿ ನನ್ನ ಬಳಿ ಬಂದು ಮಾತನಾಡಬೇಕಿತ್ತು. ನಾನೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಿದ್ದೆ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಗೊಂದಲ ಮೂಡಿಸುವುದು ಸರಿಯಲ್ಲ’ ಎಂದರು.
‘ಇದು ಕಾರ್ಯಕರ್ತರ ಪಕ್ಷ. ಕಾರ್ಯಕರ್ತರಿಲ್ಲದೆ ಇಲ್ಲಿ ಏನೂ ನಡೆಯಲ್ಲ. ಅವರ ಅಭಿಪ್ರಾಯವನ್ನು ನಾವು ಪಡೆಯುತ್ತೇವೆ. ಅಂತಿಮವಾಗಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಆಕಾಂಕ್ಷಿಗಳು ಯಾರಿದ್ದಾರೆ ಅವರೆಲ್ಲರನ್ನೂ ಕರೆದು ಮಾತನಾಡುತ್ತೇವೆ. ನಮ್ಮ ಗುರಿ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಗೆಲ್ಲುವುದು ಮಾತ್ರ’ ಎಂದು ಹೇಳಿದರು.



