ಕಾಸರಗೋಡು ನೀಲೇಶ್ವರ ದೈವಸ್ಥಾನದಲ್ಲಿ ಸುಡುಮದ್ದು ದುರಂತಕ್ಕೆ ಕಾರಣವೇನು? ಎಸ್‌ಪಿ ನೀಡಿದ್ರು ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಸರಗೋಡು ಜಿಲ್ಲೆಯ ನೀಲೇಶ್ವರ ಅಂಞೂಟಂಬಲ ಶ್ರೀ ವೀರರ್‌ಕಾವ್ ದೈವಸ್ಥಾನದಲ್ಲಿ ಶ್ರೀ ದೈವಗಳ ಕಳಿಯಾಟ ಮಹೋತ್ಸವ ನಡೆಯುತ್ತಿದ್ದಂತೆ ಸಂಭವಿಸಿದ ಭೀಕರ ಸುಡುಮದ್ದು ದುರಂತದಲ್ಲಿ 157 ಮಂದಿ ಗಾಯಗೊಂಡ ಘಟನೆ ನಡೆದಿದೆ. ಅವರಲ್ಲಿ 14 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ 5 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.

ಗಾಯಗೊಂಡವರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು, ಕಲ್ಲಿಕೋಟೆ ಮಿಮ್ಸ್ ಆಸ್ಪತ್ರೆ, ಕಣ್ಣೂರು ಮಿಮ್ಸ್ ಆಸ್ಪತ್ರೆ, ಬೇಬಿ ಮೆಮೋರಿಯಲ್ ಆಸ್ಪತ್ರೆ, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಾಞಂಗಾಡು ಜಿಲ್ಲಾಸ್ಪತ್ರೆ, ಐಶೋಲ್ ಆಸ್ಪತ್ರೆ, ದೀಪಾ ಆಸ್ಪತ್ರೆ, ಮಾವುಂಗಾಲ್‌ನ ಸಂಜೀವಿನಿ ಆಸ್ಪತ್ರೆ, ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂತಾದ ಕಡೆಗಳಲ್ಲಿ ದಾಖಲಿಸಲಾಗಿದೆ.

ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಒಳಗೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಈ ಅನಾಹುತ ಸಂಭವಿಸಿದೆ. ಶ್ರೀ ಮೂವಾಳಂಕುಯಿ ಚಾಮುಂಡಿ ದೈವದ ದರ್ಶನ ನಡೆಯುತ್ತಿದ್ದ ಸಂದರ್ಭ ಪಟಾಕಿ ಸಿಡಿಸುತ್ತಿದ್ದಾಗ ಅದರ ಕಿಡಿಯೊಂದು ಸುಡುಮದ್ದು ದಾಸ್ತಾನು ಇರಿಸಿದ ಕೇಂದ್ರಕ್ಕೆ ಬಿದ್ದಿದೆ. ಇದರಿಂದಾಗಿ ಅಲ್ಲಿದ್ದ ಸುಡುಮದ್ದು ಒಮ್ಮೆಲೇ ಸ್ಫೋಟಗೊಂಡಿರುವುದೇ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಶ್ರೀ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಶೀಟ್ ಹಾಸಿದ ಕಟ್ಟಡದಲ್ಲಿ ಪಟಾಕಿಗಳನ್ನು ದಾಸ್ತಾನಿರಿಸಲಾಗಿತ್ತು. ಅದರ ಪರಿಸರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕುಳಿತಿದ್ದರು. ಸುಡುಮದ್ದು ಸ್ಫೋಟಗೊಂಡು ಬೆಂಕಿ ಹರಡಿರುವುದರಿಂದ ಸ್ಫೋಟದ ತೀವ್ರತೆ ಹೆಚ್ಚಲು ಕಾರಣವಾಯಿತೆಂದು ತಿಳಿದುಬಂದಿದೆ. ದುರಂತ ನಡೆದ ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಸಹಿತ ಹಲವಾರು ಮಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಸುಡುಮದ್ದು ಸೋಟಕ್ಕೆ ನಿರ್ಲಕ್ಷ್ಯವೇ ಕಾರಣ: ಎಸ್‌ಪಿ
ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಕಾಞಂಗಾಡು ಡಿವೈಎಸ್‌ಪಿ ಬಾಬು ಪೆರಿಙೋತ್, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ನೀಡಿದರು.

ಸುಡುಮದ್ದು ಸ್ಫೋಟ ದುರಂತಕ್ಕೆ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದ್ದಾರೆ. ಪಟಾಕಿ ಸಂಗ್ರಹಣಾ ಕೇಂದ್ರದಲ್ಲಿ ಯಾವುದೇ ಸುರಕ್ಷತೆ ಮಾಡಲಾಗಿಲ್ಲ. ಅಲ್ಲದೆ ಅಸುರಕ್ಷಿತವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವುದು ದುರಂತಕ್ಕೆ ಕಾರಣವಾಗಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.

8 ಮಂದಿ ವಿರುದ್ಧ ಪೊಲೀಸ್ ಕೇಸು
ಸುಡುಮದ್ದು ಸ್ಫೋಟ ಅನಾಹುತಕ್ಕೆ ಸಂಬಂಧಿಸಿ ನೀಲೇಶ್ವರ ಪೊಲೀಸರು ೮ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಶ್ರೀ ಕ್ಷೇತ್ರದ ಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸಲಾಗಿದೆ. ಕಳಿಯಾಟ ಮಹೋತ್ಸವದ ಅಂಗವಾಗಿ ಪ್ರತೀ ದೈವಗಳ ದರ್ಶನ ನಡೆಯುತ್ತಿದ್ದಂತೆ ಒಂದೊಂದು ಮಾಲೆ ಪಟಾಕಿ ಸಿಡಿಸುವುದು ಇಲ್ಲಿನ ಕ್ರಮವಾಗಿದೆ ಎಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗೆ ಸಿಡಿಸಲು ಇರಿಸಿದ್ದ ಪಟಾಕಿಗಳ ದಾಸ್ತಾನು ಕೇಂದ್ರದ ಮೇಲೆ ಬೆಂಕಿಯ ಕಿಡಿ ಬಿದ್ದಿರುವುದು ದುರಂತಕ್ಕೆ ಕಾರಣವೆಂದು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳಿಯಾಟ ವೀಕ್ಷಿಸಲು ಸಾವಿರಾರು ಮಂದಿ ಆಗಮನ
ಶ್ರೀ ಕ್ಷೇತ್ರದಲ್ಲಿ ಕಳಿಯಾಟ ವೀಕ್ಷಿಸಲು ಸುಮಾರು 5000ಕ್ಕೂ ಅಕ ಮಂದಿ ಆಗಮಿಸಿದ್ದಾರೆಂದು ಅಂದಾಜಿಸಲಾಗಿದೆ. ದೈವಸ್ಥಾನದ ಅಂಗಣ ಮತ್ತು ಪರಿಸರ ಪ್ರದೇಶಗಳಲ್ಲಾಗಿ ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಮಂದಿ ನೆರೆದಿದ್ದ ಸಂದರ್ಭ ದುರಂತ ಸಂಭವಿಸಿದೆ. ಸ್ಫೋಟ ಸದ್ದು ಕೇಳಿದಾಗ ಮೊದಲು ಅದು ಪಟಾಕಿ ಸಿಡಿಸಿರುವುದಾಗಿ ಅಲ್ಲಿದ್ದ ಭಕ್ತರು ಭಾವಿಸಿದ್ದರು. ಆದ್ದರಿಂದ ಯಾರೂ ಕೂಡಾ ಅಲ್ಲಿಂದ ತೆರಳಲಿಲ್ಲ. ಆದರೆ ನಂತರ ಭಾರೀ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಹರಡತೊಡಗಿದಾಗ ದುರಂತ ಸಂಭವಿಸಿರುವ ಬಗ್ಗೆ ಅರಿವಿಗೆ ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!