ಹಾಸನದಲ್ಲಿ ಸರಣಿ ಹೃದಯಾಘಾತಕ್ಕೆ ಕಾರಣವೇನು?: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು ಸ್ಫೋಟಕ ಸಂಗತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಾಸನದಲ್ಲಿ ಜನರು ಹೃದಯಾಘಾತದಿಂದ ಸಾವಿಗೀಡಾಗಿರುವುದಕ್ಕೆ ಕಾರಣ ಮಧುಮೇಹ, ಮದ್ಯಪಾನ ಮತ್ತು ಕುಟುಂಬದ ಹಿನ್ನೆಲೆ ಅಂತ ವರದಿ ಮೂಲಕ ತಿಳಿದುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿರುವ ಕುರಿತಂತೆ ತಾಂತ್ರಿಕ ಸಮಿತಿ ಸದಸ್ಯರು ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿದರು. ವರದಿ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್​ ಗುಂಡುರಾವ್​, ಮೇ ಮತ್ತು ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ 24 ಜನರ ಸಾವಿನ ಬಗ್ಗೆ ತಜ್ಞರು ನೀಡಿದ ಅಧ್ಯಯನ ವರದಿಯಲ್ಲಿ ನಾಲ್ವರು ಹೃದಯ ಸ್ತಂಭನದಿಂದ ಮೃತಪಟ್ಟಿಲ್ಲವೆಂದು ಇದೆ. ಇನ್ನುಳಿದ 20 ಜನರಲ್ಲಿ 10 ಜನರು ಹೃದಯಕ್ಕೆ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 10 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಬಹುದು. ಮೃತಪಟ್ಟ 20 ಜನರಲ್ಲಿ 15 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದರು.

ಹಾಸನದಲ್ಲಿ ಹೃದಯಾಘಾತ ಹೆಚ್ಚಾಗ್ತಿದೆಯಾ ಎಂಬ ಆತಂಕ ಇತ್ತು. 2024ರಲ್ಲಿ ಹೃದಯಾಘಾತದಿಂದ 24 ಜನರು ಮೃತಪಟ್ಟಿದ್ದಾರೆ. ಈ ವರ್ಷ 20 ಜನರ ಸಾವಾಗಿದೆ, ಆತಂಕ ಪಡುವ ಸಂಗತಿ ಇಲ್ಲ. ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿದ್ದು ಗಂಭೀರ ವಿಚಾರವಾಗಿದೆ. ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದಕ್ಕೆ ಅತಿಯಾದ ಬೊಜ್ಜು ಕಾರಣ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು.

ಚಾಲಕರೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಆಟೋ, ಕ್ಯಾಬ್ ಚಾಲಕರ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ಆಟೋ, ಕ್ಯಾಬ್ ಚಾಲಕರಿಗೆ ಪ್ರತ್ಯೇಕ ತಪಾಸಣೆ ಮಾಡಿಸಲು ಸಲಹೆ ನೀಡುತ್ತೇನೆ. ಸ್ಕ್ರೀನಿಂಗ್ ಮಾಡಿಸಲು ಚಾಲಕರ ಸಂಘದ ಜತೆ ಮಾತುಕತೆ ಮಾಡುತ್ತೇವೆ. ಮೃತಪಟ್ಟ ಬಹುತೇಕರಲ್ಲಿ‌ ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸ ಇತ್ತು. ಸಮುದಾಯ ಪ್ರಾಥಮಿಕ ಕೇಂದ್ರದಲ್ಲಿ ಇಸಿಜಿ ವ್ಯವಸ್ಥೆ ಮಾಡುತ್ತೇವೆ. ಹೃದಯಾಘಾತಕ್ಕೂ ಕೊರೋನಾಗೂ ಸಂಬಂಧ ಇಲ್ಲವೆಂದು ಹೇಳಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!