ಇದೇನು ಸಿನಿಮಾ ಅಂದ್ಕೊಂಡ್ರಾ? ಹುಡುಗಿಯರ ಮುಖಕ್ಕೆ ಸಿಗರೇಟಿನ ಹೊಗೆ ಬಿಟ್ಟ ಬಾಯ್ಸ್‌ ಕಥೆ ಏನಾಯ್ತು ನೋಡಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಾಯು ವಿಹಾರಕ್ಕೆ ಎಂದು ಬಂದಿದ್ದ ಯುವತಿಯರು, ಮಹಿಳೆಯರ ಮುಖಕ್ಕೆ ಕೆಲ ಕಿಡಿಗೇಡಿಗಳು ಸಿಗರೇಟು ಸೇದಿದ ಬಳಿಕ ಹೊಗೆ ಬಿಟ್ಟು ದುಷ್ಟತನ ಮೆರೆದ ಘಟನೆ ಗಂಗಾವತಿಯ ಎಂಎನ್ಎಂ ಶಾಲೆಯ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಯರು, ಪುರುಷರು ಗುಂಪಾಗಿ ಕಿಡಿಗೇಡಿ ಯುವಕರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಯುವಕರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು.

ಕುವೆಂಪು ಬಡಾವಣೆ ಮತ್ತು ಜಯನಗರದ ಮಧ್ಯೆ ಇರುವ ಮಳೆಮಲ್ಲೇಶ್ವರ – ಗಾಯತ್ರಿ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದ ಜನ ವಸತಿ ಪ್ರದೇಶದಲ್ಲಿ ನೂತನ ವಸತಿ ಲೇಔಟ್ ನಿರ್ಮಾಣವಾಗಿದೆ. ಸಂಜೆ ಮತ್ತು ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವ ಜನರಿಗೆ ಈ ಲೇಔಟ್​ನ ರಸ್ತೆಗಳು ಹೇಳಿ ಮಾಡಿಸಿದಂತಿದೆ. ಹೀಗಾಗಿ ಎಂದಿನಂತೆ ಶುಕ್ರವಾರ ರಾತ್ರಿ 9 ಗಂಟೆಯ ನಂತರ ಮಹಿಳೆಯರು ವಾಯು ವಿಹಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಕುಳಿತಿದ್ದ ಯುವಕರು ಸಿಗರೇಟು ಸೇದಿ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆಯರ ಮುಖಕ್ಕೆ ಸಿಗರೇಟಿನ ಹೊಗೆ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಶಶಿಧರ ಸ್ವಾಮಿ ಮುದೇನೂರು ಮಠ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳೆಯರು ಪ್ರಶ್ನಿಸಿದ್ದಕ್ಕೆ “ನಮ್ಮ ಹಣದಲ್ಲಿ ನಾವು ಸೇದುತ್ತೇವೆ. ನೀವ್ಯಾರು ಕೇಳಲು. ಮುಖಕ್ಕೆ ಹೊಗೆ ಬರಬಾರದು ಎಂದರೆ ಈ ರಸ್ತೆಯಲ್ಲಿ ಓಡಾಡಬಾರದು” ಎಂದು ಯುವಕರು ತಾಕೀತು ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ತಿಳಿದು ಬಂದಿದೆ.

ಇದರಿಂದ ಕೋಪಗೊಂಡ ಮಹಿಳೆಯರು, ಯುವಕರನ್ನು ತರಾಟೆಗೆ ತೆಗೆದುಕೊಳ್ಳುತಿದ್ದಂತೆಯೇ ಜನ ಜಮಾಯಿಸಿ ಯುವಕರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ 112 ವಾಹನ ಸ್ಥಳಕ್ಕೆ ಬಂದು ಯುವಕರನ್ನು ಕರೆದೊಯ್ದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!