ಹಣಕ್ಕೆ, ನದಿಗೆ, ಮಾನವೀಯತೆಗೆ ಯಾವ ಧರ್ಮವಿದೆ?: ನಟ ಪ್ರಕಾಶ್‌ ರಾಜ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಈ ಹಿಂದೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು. ಅವರು ಸರಿ ಇಲ್ಲ ಎನ್ನುವ ಕಾರಣಕ್ಕೆ ಬೇರೆ ಪಕ್ಷಕ್ಕೆ ಅಧಿಕಾರ ಸಿಕ್ಕಿತು. ಆದರೆ, ಅಧಿಕಾರಕ್ಕೆ ಬಂದ ಪಕ್ಷ, ಹಿಂದು-ಮುಸ್ಲಿಂ ಎನ್ನುವ ಮತಾಂಧತೆ ವಿಚಾರ ಬಿಟ್ಟರೆ ಮತ್ತೆ ಯಾವ ಕೆಲಸ ಮಾಡುತ್ತಿದ್ದಾರೆ ಎಂದು ನಟ ಪ್ರಕಾಶ್‌ ರಾಜ್‌ ಪ್ರಶ್ನೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಅಧಿಸೂಚನೆ ಪ್ರಕಟಿಸಿದ್ದಕ್ಕೆ ಪ್ರಕಾಶ್‌ ರಾಜ್‌ ಕೆಂಡಾಮಂಡಲರಾಗಿದ್ದಾರೆ.

ದೇಶದಲ್ಲಿ ರೈತರ ಸಮಸ್ಯೆಯನ್ನು ಬಗೆಹರಿಸುವ ಯಾವ ಪ್ರಯತ್ನ ಕೂಡ ಕಾಣುತ್ತಿಲ್ಲ. ಬರೀ ಮಂದಿರ ಮಂದಿರ ಎಂದುಕೊಂಡು ಹೋಗುತ್ತಿದ್ದಾರೆ. ಇದರಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ದೇಶಕ್ಕಾಗಿ ಜನರಿಗಾಗಿ ಮಾತನಾಡುತ್ತೇನೆ. ಯಾವ ಪಕ್ಷದ ವಿರುದ್ಧವೂ ನನಗೆ ವೈಯಕ್ತಿಕವಾಗಿ ಏನೂ ಇಲ್ಲ. ಇಲ್ಲಿನ ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಬೆಲೆ ಏರಿಕೆ ತಾಂಡವವಾಡುತ್ತಿದೆ. ಶಾಲೆಗಳು ಸರಿಯಾಗಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸದೇ ಬರೀ ಮಂದಿರದ ಜಪ ಮಾಡಿಕೊಂಡು ಕುಳಿತಿದ್ದಾರೆ ಎಂದು ಟೀಕಿಸಿದ್ದಾರೆ. ಧರ್ಮಗಳನ್ನು ವಿಂಗಡಣೆ ಮಾಡಿ ಎನ್ನುವ ಕಾರಣಕ್ಕೆ ನಾವು ತೆರಿಗೆ ಕಟ್ಟುತ್ತಿಲ್ಲ. ಹಣಕ್ಕೆ, ನದಿಗೆ, ಮಾನವೀಯತೆಗೆ ಯಾವ ಧರ್ಮವಿದೆ? ಇದರ ಆಧಾರದ ಮೇಲೆ ಅಧಿಕಾರ ಹಿಡಿದವರನ್ನು ಜನರೇ ಕೆಳಗೆ ಇಳಿಸುತ್ತಾರೆ ಎಂದಿದ್ದಾರೆ.

ಸಿಎಎ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಎ ಅನ್ನೋ ಕಾಯ್ದೆಯೇ ತಪ್ಪು. ಧರ್ಮದ ಆಧಾರದಲ್ಲಿ ಒಂದು ದೇಶ ಪೌರತ್ವ ನೀಡೋಕೆ ಹೇಗೆ ಸಾಧ್ಯ? ಸಂವಿಧಾನದಲ್ಲಿ ಮುನುಷ್ಯನಿಗೆ ನಾಗರೀಕತೆ ಮೊದಲು ಕೊಡಬೇಕು ಎನ್ನಲಾಗಿದೆ. ನಾವು ಗಾಳಿಪಟ ಹಾರಿಸುತ್ತೇವೆ. ಗಡಿ ದಾಟಿ ಹಾಗೇನಾದರೂ ಆಚೆ ಹೋದರೆ ಇದಕ್ಕಾಗಿ ಗಲಾಟೆ ಮಾಡಿಕೊಳ್ಳೋಕೆ ಆಗುತ್ತಾ? ಗಡಿಗಳನ್ನು ಮಾಡಿಕೊಂಡವರು ನಾವು. ದೇಶದಲ್ಲಿ ಮಾನವೀಯತೆಯ ಆಧಾರದ ಮೇಲೆ ಪೌರತ್ವ ಕೊಡಬೇಕು ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಒಂದು ಜಾತಿ, ಧರ್ಮದವರಿಗೆ ಪೌರತ್ವ ಇಲ್ಲ ಅನ್ನೋದು ತಪ್ಪು. ಇದು ಸಂವಿಧಾನವೂ ಹೇಳೋದಿಲ್ಲ. ಕಷ್ಟದಲ್ಲಿ ಯಾರೇ ಇದ್ದರೂ ಅವರು ಮೊದಲು ಮನುಷ್ಯರು. ಒಂದು ಧರ್ಮ ಬಿಟ್ಟು ಬೇರೆಲ್ಲ ಧರ್ಮಕ್ಕೆ ಪೌರತ್ವ ನೀಡುತ್ತೇವೆ ಅನ್ನೋದು ಮತಾಂಧರು ಮಾಡುವ ಕೆಲಸ. ಚುನಾವಣೆ ಇದೇ ಅನ್ನೋವಾಗಲೇ ಸಿಎಎ ಜಾರಿಗೆ ತಂದಿದ್ದಾರೆ. ಮೆಜಾರಿಟಿ ಇದೇ ಎನ್ನುವ ಕಾರಣಕ್ಕೆ ಇದನ್ನು ಜಾರಿಗೆ ತಂದು ಏನೂ ಸಾಧಿಸುತ್ತೇವೆ ಅನ್ನೋದು ನಿಮ್ಮ ನಂಬಿಕೆ ಮಾತ್ರ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!