ಮಳೆಗಾಲ ಆರಂಭವಾಗ್ತಿದ್ದಂತೆಯೇ ಆಸ್ಪತ್ರೆಗಳಲ್ಲಿ ತುಸು ಹೆಚ್ಚೇ ರಶ್ ಇರುತ್ತದೆ. ಶೀತ, ಕೆಮ್ಮು, ತಲೆನೋವು,ಅತಿಸಾರ, ಟೈಫೈಡ್, ಕಾಲರಾ ಹಾಗೇ ವಾಹಕಗಳಿಂದ ಹರಡುವ ಡೆಂಗ್ಯೂ ಮತ್ತು ಮಲೇರಿಯಾ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಾಗಿವೆ. ಮಳೆಗಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನಕೊಡುವುದು ಅನಿವಾರ್ಯ. ಅದರಲ್ಲಿಯೂ ಮನೆಯಲ್ಲಿ ಮಕ್ಕಳು, ವೃದ್ಧರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಇದ್ದಲ್ಲಿ ಸುತ್ತಮುತ್ತಲಿನ ಜಾಗದ ಮೇಲೂ ಗಮನ ಇಡಿ.
ಮಳೆಗಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ವೈದ್ಯರಿಂದ ನೇರ ಮಾಹಿತಿ ಇಲ್ಲಿದೆ..
ಹೀಗಾಗಿ ಮಳೆಗಾಲದಲ್ಲಿ ಇಂತಹ ಆರೋಗ್ಯ ಸಮಸ್ಯೆಯಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಮಳೆಗಾಲದಲ್ಲಿ ಸ್ವಚ್ಛತೆ ಬಹಳ ಮುಖ್ಯ, ಮನೆಯ ಹೊರಗೆ ಮತ್ತು ಒಳಗೆ ಶುಚಿಯಾದ ಪರಿಸರವಿರಲಿ. ಆದಷ್ಟು ತಾಜಾ ತಯಾರಿಸಿದ ಆಹಾರಗಳನ್ನು ಸೇವಿಸಿ. ಶುದ್ಧವಾದ, ಕುದಿಸಿ ಆರಿಸಿದ ನೀರು ಸೇವನೆ ಉತ್ತಮ. ರಸ್ತೆ ಬದಿ ಸಿಗುವ ಆಹಾರ ಪದಾರ್ಥಗಳ ಸೇವನೆ ಬೇಡ, ತರಕಾರಿ, ಹಣ್ಣುಗಳನ್ನು ಚೆನ್ನಾಗಿ ತೊಳೆದು ಸೇವಿಸಿ. ಆದಷ್ಟು ಬೇಯಿಸಿದ, ಬಿಸಿ ಆಹಾರ ಸೇವನೆ ಉತ್ತಮ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ.
ಸುತ್ತಮುತ್ತ ನೀರು ನಿಲ್ಲದಂತೆ ಗಮನವಹಿಸಿ
ಮಳೆಗಾಲದಲ್ಲಿ ಡೆಂಗ್ಯೂ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಈಡಿಎಸ್ ಸೊಳ್ಳೆಗಳು ನಿಂತ ನೀರಿನಲ್ಲಿ ವಂಶವೃದ್ಧಿ ಮಾಡುತ್ತವೆ. ಇವು ಡೆಂಗ್ಯೂದಂತಹ ರೋಗವನ್ನು ಹರಡುತ್ತವೆ. ಹೀಗಾಗಿ ಮಳೆಗಾಲದಲ್ಲಿ ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ನೀರಿನ ತೊಟ್ಟಿಯಲ್ಲಿನ ನೀರು ಕಲುಶಿತಗೊಳ್ಳದಂತೆ ನೋಡಿಕೊಳ್ಳಿ ಹಾಗೇ ಹೂ ಕುಂಡಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿ. ಇಂತಹ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿರುತ್ತದೆ.
ಮಕ್ಕಳನ್ನು ನೋಡಿಕೊಳ್ಳೋದು ಹೇಗೆ?
ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಸೊಳ್ಳೆಗಳ ಸಂಚಾರ ಹೆಚ್ಚಾಗಿರುವ ವೇಳೆ ಆದಷ್ಟು ತುಂಬು ತೋಳಿನ ದಿರಿಸು ಧರಿಸಿ, ಮಲಗುವಾಗ ಸೊಳ್ಳೆ ನಿವಾರಕ, ನೆಟ್‌ಗಳನ್ನು ಬಳಸುವುದು ಉತ್ತಮ. ಕಿಟಕಿಗಳಿಗೆ ಮೆಶ್ ಗಳನ್ನು ಅಳವಡಿಸುವ ಮೂಲಕ ಮನೆಯೊಳಗೆ ಸೊಳ್ಳೆಗಳು ಬರದಂತೆ ತಡೆಯಿರಿ. ಮಳೆಗಾಲದಲ್ಲಿ ಮಕ್ಕಳು ಬಲು ಬೇಗ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ. ಹೀಗಾಗಿ ಅವರನ್ನು ಆದಷ್ಟು ಒಣ ಪ್ರದೇಶದಲ್ಲಿ ಆಡಲು ಉತ್ತೇಜಿಸಿ, ಬೆಚ್ಚನೆಯ ಬಟ್ಟೆ ಹಾಗೂ ಕಾಲು ಮತ್ತು ಕೈ ಮುಚ್ಚುವಂತಹ ಬಟ್ಟೆಯನ್ನು ನೀಡಿ. ಮಳೆಯಲ್ಲಿ ನೆನೆಯುವುದು, ಕಲುಷಿತ ನೀರಿನಲ್ಲಿ ಆಡುವುದು ಆರೋಗ್ಯ ಸಮಸ್ಯೆಗೆ ದಾರಿಯಾಗಬಹುದು. ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ಯುಕ್ತ ಆಹಾರಗಳನ್ನು ನೀಡಿ, ಹ್ಯಾಂಡ್‌ವಾಶ್ ಉಪಯೋಗಿಸಿ ಕೈ ತೊಳೆಯಿಸಿ.
ಜ್ವರ, ಮೈಕೈ ನೋವು, ಕೆಮ್ಮು, ಅತಿಸಾರದಂತಹ ಲಕ್ಷಣಗಳನ್ನು ಕಡೆಗಣಿಸದೇ, ತಕ್ಷಣ ಚಿಕಿತ್ಸೆ ಕೊಡಿಸಿ ಎಂದು ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿಎನ್ ಕನ್ಸಲ್ಟೆಂಟ್ ಡಾ. ಬಸವಪ್ರಭು ಮಾಹಿತಿ ನೀಡಿದ್ದಾರೆ.