ಮಕ್ಕಳಿಗೆ ಊಟ ಮಾಡಿಸೋದು ದೊಡ್ಡ ಸಾವಲೇ ಹೌದು, ಟಿವಿ ಹಾಕಿದ್ರೇನೆ ತಿನ್ನೋದು ಅನ್ನೋ ಮಕ್ಕಳಿದ್ದಾರೆ, ಹಾಗೆ ಟಿವಿ ಹಾಕಿದ್ರೂ ತಿನ್ನೋದಿಲ್ಲ ಎನ್ನುವ ಮಕ್ಕಳೂ ಇದ್ದಾರೆ. ಊಟದ ಬಗ್ಗೆ ಮಕ್ಕಳ ಆಸಕ್ತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಒಂದು ವರ್ಷದೊಳಗಿನ ಮಕ್ಕಳಿಗೆ ಇನ್ನೂ ಸಾಲಿಡ್ ಫುಡ್ ನೀಡೋದು ಕಡಿಮೆ, ಮಕ್ಕಳು ಹಾಗೇ ನುಂಗಿಬಿಡುತ್ತಾರೆ ಎನ್ನುವ ಭಯಕ್ಕೆ ಅವರಿಗೆ ರಾಗಿ ಸರಿ, ಹಣ್ಣಿನ ರಸವನ್ನು ನೀಡಲಾಗುತ್ತದೆ.
ಆದರೆ ಏಕಾಏಕಿ ಮಕ್ಕಳು ತಿನ್ನೋಕೆ ಹಠ ಮಾಡಿದ್ರೆ? ಊಟ ಬೇಡ ಎಂದರೆ? ತಲೆ ಕೆಡಿಸಿಕೊಳ್ಳಬೇಡಿ, ಬುದ್ದಿ ಬಂದಮೇಲೆ ನೀವು ಕೊಡುವ ಸಪ್ಪೆ ಊಟ ಅವರ‍್ಯಾಕೆ ತಿಂತಾರೆ ಹೇಳಿ? 12-18 ತಿಂಗಳಿನಲ್ಲಿ ಮಕ್ಕಳು ಸೆಲೆಕ್ಟೀವ್ ಅಥವಾ ಪಿಕ್ಕಿ ಈಟಿಂಗ್ ಅಭ್ಯಾಸ ಬೆಳೆಸಿಕೊಳ್ತಾರೆ, ಇಲ್ಲಿ ಹೊಸರೀತಿಯ ಟೇಸ್ಟ್, ಊಟ ಯಾವುದೂ ಅವರಿಗೆ ಇಷ್ಟವಾಗೋದಿಲ್ಲ. ಹೊಸತನ್ನು ಟ್ರೈ ಮಾಡೋದಕ್ಕೂ ಇಷ್ಟ ಪಡೋದಿಲ್ಲ.
ಇದು ಒಂದು ಕಾರಣವಾದ್ರೆ ಮಕ್ಕಳು ಚೆನ್ನಾಗಿ ತಿನ್ನಲಿ, ದಪ್ಪ ಆಗಲಿ, ಆರೋಗ್ಯ ಚೆನ್ನಾಗಿರಲಿ ಎಂಬೆಲ್ಲಾ ಉದ್ದೇಶದಿಂದ ಸಿಕ್ಕಿದ್ದನ್ನೆಲ್ಲಾ ತಿನಿಸಿರುತ್ತೀರಿ, ತಿನ್ನದೇ ಹೋದ್ರೆ ಫೋರ್ಸ್ ಹಾಕಿ ತಿನ್ನಿಸಿರುತ್ತೀರಿ. ಇದರಿಂದಾಗಿ ಊಟ ಎಂದರೆ ಮಕ್ಕಳಿಗೆ ಇಷ್ಟವಾಗೋದಿಲ್ಲ, ಊಟ ಮಾಡಿಸ್ತಾ ನನಗೆ ನೋವು ಮಾಡ್ತಾರೆ, ನನಗೆ ತೊಂದರೆಯಾಗುತ್ತದೆ. ನಾನು ತಪ್ಪಿಸ್ಕೋಬೇಕು ಎಂದು ಮಕ್ಕಳು ಯೋಚನೆ ಮಾಡುತ್ತಾರೆ.
ಏನು ಮಾಡಬಹುದು?
- ಮಕ್ಕಳಿಗೆ ಊಟ ತಿಂಡಿ ತಿನ್ನೋದಕ್ಕೆ ಫೋರ್ಸ್ ಮಾಡಬೇಡಿ, ಅವರಿಗೆ ಹಸಿವು ಅನ್ನೋದನ್ನು ಅರ್ಥ ಮಾಡಿಸಿ.
- ಅವರ ಜೊತೆಗೆ ಕುಳಿತು ಊಟ ಮಾಡಿ, ಊಟ ಎಷ್ಟು ಚೆನ್ನಾಗಿದೆ, ನೀವು ಅದನ್ನು ಎಂಜಾಯ್ ಮಾಡುತ್ತಿದ್ದೀರ ಎನ್ನುವುದನ್ನು ಅವರು ನೋಡಲಿ.
- ಅಡುಗೆ ಮನೆಗೆ ಮಕ್ಕಳನ್ನು ಬಿಟ್ಟುಕೊಳ್ಳಿ, ಸಣ್ಣ ಪುಟ್ಟ ಕೆಲಸ ಮಾಡಿಸಿ, ಅವರಿಗೆ ಅಡುಗೆ ಹೇಗೆ ತಯಾರಾಗುತ್ತದೆ ಗೊತ್ತಿರಲಿ.
- ಊಟಕ್ಕೆ ಮುನ್ನ ನೀರು ಕುಡಿಸಬೇಡಿ, ನೀರಿನಲ್ಲೇ ಹೊಟ್ಟೆ ತುಂಬಿದಾಗ ಊಟ ಹೇಗೆ ಮಾಡ್ತಾರೆ?
- ಸರಿಯಾದ ಪ್ರಮಾಣದಲ್ಲಿ ತಿನ್ನಿಸಿ, ಬೆಳಗ್ಗೆ ತಿಂಡಿಗೆ ಹೆಚ್ಚು ತಿನ್ನಿಸಿ ಆಮೇಲೆ ಊಟ ಮಾಡ್ತಾ ಇಲ್ಲ ಎಂದು ದೂರಬೇಡಿ.
- ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಗೆಡಬೇಡಿ, ಹೊಸ ಹೊಸ ಆಹಾರವನ್ನು ಸಾಕಷ್ಟು ಸಲ ನೀಡಿ, ಒಂದಲ್ಲಾ ಒಂದು ಬಾರಿ ತಿಂದೇ ತಿಂತಾರೆ.
- ಅವರ ಜೊತೆಗೆ ನೀವು ಊಟ ಮಾಡಿ, ಊಟ ಮಾಡದೇ ಹೋದ್ರೆ ಏನೆಲ್ಲಾ ಆಗುತ್ತದೆ ಹೇಳಿಕೊಡಿ.
- ಮನೆಯಲ್ಲಿ ಮೊಬೈಲ್ ಗೇಮ್ಸ್ ಅಥವಾ ಕುಳಿತುಕೊಂಡೇ ಆಡುವ ಆಟಗಳ ಬದಲು ಹೊರಗೆ ಕಳಿಸಿ, ದಣಿದಷ್ಟು ಹಸಿವು ಜಾಸ್ತಿ.