ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 14ರಂದು ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಈ ಬಾರಿಯ ವಿವಾಹ ವಾರ್ಷಿಕೊತ್ಸವ ಅವರಿಗೆ ಡಬಲ್ ಖುಷಿ ನೀಡಿದೆ. ಯಾಕೆಂದರೆ ರಾಮ್ ಚರಣ್ (Ram Charan) ಪತ್ನಿ ಉಪಾಸನಾ ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.
ತುಂಬು ಗರ್ಭಿಣಿ ಉಪಾಸನಾ ಅವರಿಗೆ ಇತ್ತೀಚಿಗಷ್ಟೆ ಅದ್ದೂರಿ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಹೈದರಾಬಾದ್ನಲ್ಲಿ ನಡೆದಿದ್ದ ಸೀಮಂತ ಸಂಭ್ರಮದಲ್ಲಿ ಚಿರಂಜೀವಿ ಇಡೀ ಕುಟುಂಬ ಜೊತೆಗೆ ಆಪ್ತರು ಹಾಗು ಸಿನಿ ಗಣ್ಯರು ಹಾಜರಾಗಿದ್ದರು.
ಉಪಾಸನಾ ಅವರು ಮೊದಲ ಬಾರಿಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಾವು ಅಮ್ಮನಾಗುತ್ತಿರುವ ಬಗ್ಗೆ ಅಮ್ಮಂದಿರ ದಿನದಂದು ಖುಷಿ ಹಂಚಿಕೊಂಡಿದ್ದರು.
ಈ ವೇಳೆ ಹಲವು ವಿಚಾರ ಹಂಚಿಕೊಂಡ ಅವರು, ನಾನು ತಾಯಿಯಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಹೇಳಿದ್ದರು.
ಮದುವೆಯಾಗಿ 10 ವರ್ಷಗಳಾದರೂ ಮಕ್ಕಳಾಗದಿದ್ದ ಬಗ್ಗೆ ಪದೇ ಪದೇ ಕೇಳಲಾಗುತ್ತಿದ್ದ ಪ್ರಶ್ನೆಗೆ ಈಚೆಗೆ ಉತ್ತರಿಸಿದ್ದ ಉಪಾಸನಾ ಅವರು, ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ಒತ್ತಡವಿತ್ತು. ಆದರೆ ರಾಮ್ ಚರಣ್ ಮತ್ತು ನಾನು ಯಾವುದೇ ಪರಿಣಾಮ ಬೀರಲು ಬಿಡಲಿಲ್ಲ ಎಂದಿದ್ದರು.
‘ನಾನು ತುಂಬಾ ಉತ್ಸುಕಳಾಗಿದ್ದೇನೆ. ತುಂಬಾ ಹೆಮ್ಮೆಪಡುತ್ತೇನೆ. ಸಮಾಜ ಬಯಸಿದಾಗ ಅಲ್ಲ ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ಮಗುವನ್ನು ಪಡೆಯುತ್ತಿದ್ದೇವೆ. ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ (Children) ನಾವೆ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ನಾವು ದಂಪತಿ ಸಮಾಜ ಅಥವಾ ಕುಟುಂಬದಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡ ಬರಲು ಬಿಡಲಿಲ್ಲ. ಇದು ನಮ್ಮ ಸಂಬಂಧದ ಬಗ್ಗೆ ಮತ್ತು ನಾವು ಹೇಗೆ ಮಗುವನ್ನು ಬೆಳೆಸಲಿದ್ದೇವೆ ಎನ್ನುವ ಬಗ್ಗೆ ಸಾಕಷ್ಟು ಹೇಳುತ್ತೆ’ ಎಂದು ಹೇಳಿದ್ದರು.
ಇದೇ ವೇಳೆ ಮೊದಲ ಬಾರಿಗೆ ತಾವು ಗರ್ಭಿಣಿ ಎಂದು ಗೊತ್ತಾದಾಗ ರಾಮ್ ಚರಣ್ ಅವರ ರಿಯಾಕ್ಷನ್ ಹೇಗಿತ್ತು ಎಂಬ ಬಗ್ಗೆ ಉಪಾಸನಾ (Upasana) ಮಾತನಾಡಿದ್ದು, ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಮೊದಲ ಬಾರಿಗೆ ತಿಳಿಸಿದಾಗ ರಾಮ್ ಚರಣ್ ಅವರು ಮೊದಲಿಗೆ ಅತಿಯಾಗಿ ಖುಷಿಪಡಲಿಲ್ಲ ಎಂದಿದ್ದಾರೆ .
ನಾನು ರಾಮ್ ಚರಣ್ ಅವರಿಗೆ ಮೊದಲ ಬಾರಿ ಈ ವಿಷಯ ತಿಳಿಸಿದಾಗ ಅವರು ಈಗಲೇ ಇಷ್ಟೆಲ್ಲಾ ಖುಷಿಪಡಬೇಡ, ಸಮಾಧಾನದಿಂದ ಇರು ಅಂತ ಅವರು ನನಗೆ ಹೇಳಿದರು. ಏಕೆಂದರೆ ಗರ್ಭಿಣಿ ಹೌದೋ ಅಲ್ಲವೋ ಎನ್ನುವುದು ಮೊದಲು ಕನ್ಫರ್ಮ್ ಆಗಬೇಕಿತ್ತು. ಪ್ರೆಗ್ನೆಂಟ್ (pregnant) ಆಗಿರೋದು ನಿಜವೋ ಅಲ್ಲವೋ ಎಂಬ ಬಗ್ಗೆ ಹಲವು ಬಾರಿ ಪರೀಕ್ಷೆ ಮಾಡಿಸಿದೆವು. ಎಲ್ಲ ಪರೀಕ್ಷೆ ಸರಿಯಾಗಿದೆ ಎಂದು ತಿಳಿದ ನಂತರವಷ್ಟೇ ರಾಮ್ ಚರಣ್ ಸೆಲೆಬ್ರೇಟ್ ಮಾಡಿದರು ಎಂದಿದ್ದಾರೆ ಉಪಾಸನಾ.
ಈ ಬಗ್ಗೆ ಪತಿಯ ಬಗ್ಗೆ ತಮಗೆ ಹೆಮ್ಮೆ ಇದೆ. ರಾಮ್ ಚರಣ್ ಅವರ ಈ ಗುಣ ನನಗೆ ಬಹಳ ಇಷ್ಟ. ನಾನು ಬಹಳ ಎಗ್ಸೈಟಿಂಗ್ ಆದಂತಹ ವ್ಯಕ್ತಿ. ನನ್ನನ್ನು ಸಮಾಧಾನ ಪಡಿಸುವುದು ಅವರೇ. ಭಾವನೆಗಳನ್ನು ಅಭಿವ್ಯಕ್ತಿಸುವುದು ನನಗೆ ಇಷ್ಟ. ಆದರೆ ಅವರು ತಮ್ಮದೇ ಶೈಲಿಯಲ್ಲಿ ಸಮಾಧಾನದಿಂದ ಭಾವನೆಗಳನ್ನು ಹೊರಹಾಕುತ್ತಾರೆ’ ಎಂದು ಉಪಾಸನಾ ಹೇಳಿದ್ದಾರೆ.