ಅಂದು ಬಿಗ್​​ಬಾಸ್​ನಿಂದ ಹೊರ ಬರಲು ಕಾರಣ ಏನು?: ಕಿಚ್ಚ ಸುದೀಪ್ ನೀಡಿದ್ರು ಉತ್ತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಕನ್ನಡ 11ನೇ ಸೀಸನ್ ನಲ್ಲಿ ಕಿಚ್ಚ ಸುದೀಪ್ ಮುಂದಿನ ಶೋ ನಿರೂಪಣೆ ಮಾಡಲ್ಲ ಎಂದು ಹೇಳಿದ್ದರು. ಆದರೆ ಈಗ ಅವರು ಮತ್ತೆ ಮನಸ್ಸು ಬದಲಾಯಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ.

ಇದೀಗ ಆ ದಿನ ಅವರು ಶೋನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸರಿಯಾದ ಮನ್ನಣೆ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ನಿರೂಪಣೆ ನಿಲ್ಲಿಸಲು ನಿರ್ಧರಿಸಿದ್ದರು.

ಮತ್ತೆ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡಬೇಕು ಎಂದು ‘ಕಲರ್ಸ್ ಕನ್ನಡ’ ವಾಹಿನಿಯವರು ಮನವೊಲಿಸಲು ಹೋದಾಗ ಸುದೀಪ್ ಕೆಲವು ಸಲಹೆಗಳನ್ನು ನೀಡಿದರು. ತಮಗೆ ಈ ಹಿಂದೆ ಇದ್ದ ಅಸಮಾಧಾನಗಳ ಬಗ್ಗೆ ಅವರು ವಾಹಿನಿಯವರಿಗೆ ತಿಳಿಸಿದರು. ಅದು ಏನು ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ವಿವರಿಸಿದರು.

‘ನೀವು ಯಾವುದೇ ಚಾನಲ್​ನಲ್ಲಿ ಏನಾದರೂ ಮಾಡಿ. ನಮ್ಮ ಮೂಲ ಕನ್ನಡ. ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ. ಎಲ್ಲಿಂದ? ಮೇಲಿಂದ. ನಮಗೆ ಇಲ್ಲಿ ವಾಹಿನಿಯವರಿಂದ ಯಾವುದೇ ರೀತಿಯ ಕೊರತೆ ಬಂದಿಲ್ಲ. ಆದರೆ ಮೇಲಿನವರಿಂದ ಆ ಪ್ರೀತಿ ಕಾಣಿಸುತ್ತಾ ಇರಲಿಲ್ಲ. ಇದು ನಾನು ಯಾರ ಮೇಲೂ ಮಾಡುತ್ತಿರುವ ಆರೋಪ ಅಲ್ಲ. ಇದು ನನ್ನ ವೈಯಕ್ತಿಯ ಅಭಿಪ್ರಾಯ’ ಎಂದಿದ್ದಾರೆ ಸುದೀಪ್.

ಬೇರೆ ಭಾಷೆಗಳಲ್ಲಿ ಚೆನ್ನಾಗಿ ನಡೆಯುತ್ತಾ ಇರುತ್ತದೆ, ನಡೆಯಲಿ, ನಡಿಯಬೇಕು. ಅವರವರಿಗೆ ಅವರವರ ಭಾಷೆ ಮುಖ್ಯ. ಬರುಬರುತ್ತ ಕನ್ನಡದ ವಾಹಿನಿಯವರು ತೋರಿಸುತ್ತಿರುವ ಶ್ರಮ ಮತ್ತು ಪ್ರೀತಿಯು ಮೇಲಿನವರಿಂದ ನನಗೆ ಕಾಣಿಸುತ್ತಾ ಇರಲಿಲ್ಲ. ಕಾಣಿಸುತ್ತಿಲ್ಲ ಎಂದಾಗ ನಾನು ಬಹಳ ತಿದ್ದುವ ವ್ಯಕ್ತಿ ಅಲ್ಲ, ತಿದ್ದಿಕೊಳ್ಳುವ ವ್ಯಕ್ತಿ. ನೀವೇ ನಡೆಸಿ ಅಂತ ಸುಮ್ಮನಾದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ನಮ್ಮ ಸ್ಪರ್ಧಿಗಳಿಗೂ ಒಳ್ಳೆಯ ಮನೆ ಕೊಡಿ. ಸ್ವಂತ ಮನೆ-ಮಠ ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂದರೆ ಆ ಮನೆ ಇನ್ನೂ ಚೆನ್ನಾಗಿ ಇರಬೇಕು. ಕೇವಲ ನಾಲ್ಕು ಗೋಡೆ ರೀತಿ ಇರಬಾರದು. ಆ ಮನೆ ನೋಡಿದರೆ ನಮ್ಮ ವೀಕ್ಷಕರಿಗೆ ಇನ್ನಷ್ಟು ಖುಷಿ ಆಗಬೇಕು. ತಾವು ಹೋಗಬೇಕು ಅಂತ ನಮ್ಮ ವೀಕ್ಷಕರಿಗೂ ಆಸೆ ಆಗಬೇಕು ಎಂದಿದ್ದಾರೆ .

‘ನನ್ನ ವೇದಿಕೆ ನನ್ನ ಗತ್ತು. ನನ್ನ ಇಡೀ ಬಿಗ್ ಬಾಸ್ ಜೀವನ ನಡೆಯುವುದೇ ಆ ವೇದಿಕೆ ಮೇಲೆ. ಹಾಗಿರುವಾಗ ಅದು ನಮಗೆ ಸ್ವಲ್ಪ ಕಂಫರ್ಟ್ ಆಗಿರಬೇಕು. ನೀಟಾಗಿ ಇರಬೇಕು. ನಮಗೆ ರೇಟಿಂಗ್ ಬರುತ್ತಿರುವುದು ನಮ್ಮ ಭಾಷೆ, ನಮ್ಮ ಜನರಿಂದ ಎಂದಮೇಲೆ ಅದು ನನಗೆ ಬಹಳ ಮುಖ್ಯ ಆಗುತ್ತದೆ. ಹಾಗಂತ ಇಲ್ಲಿ ಯಾರೂ ತಪ್ಪು ಮಾಡುತ್ತಿದ್ದಾರೆ ಅಂತ ಅಲ್ಲ. ಸರಿಪಡಿಸಿಕೊಳ್ಳಲಿ ಎಂಬುದು ನನ್ನ ಆಸೆ ಆಗಿತ್ತು. ಯಾರೂ ಹಿಂದೇಟು ಹಾಕಲಿಲ್ಲ. ಎಲ್ಲರೂ ಬಂದು ಸ್ಪಂದಿಸಿದರು. ಅದು ನನಗೆ ಖುಷಿ ಇದೆ’ ಎಂದು ಸುದೀಪ್ ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!