ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸಿ ಇದೀಗ ಫೈನಲ್ಸ್‌ಗೆ ಪ್ರವೇಶಿಸಿದೆ. ಒಟ್ಟಾರೆ ಟೀಂ ಇಂಡಿಯಾ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಲ್ಲಿ ರಾತ್ರಿ 8 ಗಂಟೆಯಿಂದ ಫೈನಲ್ ಪಂದ್ಯವನ್ನು ಆಡಲಿದೆ.
ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಎರಡೂ ತಂಡಗಳು ಒಂದೂ ಪಂದ್ಯವನ್ನು ಸೋಲದೆ ಫೈನಲ್‌ಗೆ ಪ್ರವೇಶಿಸಿದೆ. ಆದರೆ ಈ ರೋಚಕ ಪಂದ್ಯಕ್ಕೆ ಮಳೆ ಕಂಟಕ ಎದುರಾಗುವ ಸಾಧ್ಯತೆ ಇದೆ.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಇಂದು ಹಗಲಿನಲ್ಲಿ ಮಳೆಯ ಸಂಭವ ಇದೆ. ಪ್ರತಿಶತ 78 ಮಳೆ ಬರುವ ಸಾಧ್ಯತೆ ಇದೆ. ಜೋರಾದ ಗಾಳಿ ಕೂಡ ಇರಲಿದೆ. ಕೊನೆಯವರೆಗೂ ಮೋಡ ಕವಿದ ವಾತಾವರಣ ಇರಲಿದೆ. ರಾತ್ರಿ ವೇಳೆ ಶೇ.87ರಷ್ಟು ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 30 ಅಂತಿಮ ಪಂದ್ಯಕ್ಕೆ ಮೀಸಲು ದಿನ ನಿಗಧಿ ಆಗಿದೆ. ಆದರೆ ಜೂನ್ 30 ರಂದು ಕೂಡ ಮಳೆ ಬೀಳುವ ಅಪಾಯ ಇದೆ. ಜೂನ್ 30 ರಂದು ಶೇ.61 ರಷ್ಟು ಮಳೆಯಾಗುವ ಸಂಭವವಿದ್ದು, ರಾತ್ರಿ ವೇಳೆ ಶೇ.49 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲು ದಿನವೂ ಪಂದ್ಯ ನಡೆಯುವ ಸಾಧ್ಯತೆ ಇಲ್ಲ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಪಂದ್ಯಕ್ಕೆ ಐಸಿಸಿ ಜೂನ್ 30 ರಂದು ಮೀಸಲು ದಿನವನ್ನಾಗಿ ಇರಿಸಿದೆ. ಜೂನ್ 29 ರಂದು ಪಂದ್ಯವನ್ನು ನಡೆಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಅದು ಸಾಧ್ಯವಾಗದಿದ್ದಾಗ ನಾಳೆ ಆಡಿಸಲಾಗುತ್ತದೆ. ನಾಳೆಯೂ ಕೂಡ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.