ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಟಿಕೆಟ್ ದರ ಏರಿಕೆ ವಿಚಾರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿಗೆ ಸರ್ಕಾರ ಮುಂದಾಗಿ ಬಳಿಕ ನ್ಯಾಯಾಲಯದ ತಡೆ ಎದುರಾದ ಬೆನ್ನಲ್ಲೇ, ಇದೀಗ ನೆರೆಯ ಆಂಧ್ರ ಪ್ರದೇಶದಲ್ಲೂ ಇದೇ ಬೇಡಿಕೆ ಜೋರಾಗಿ ಕೇಳಿಬರುತ್ತಿದೆ. ಹೊಸ ಸಿನಿಮಾಗಳು ಬಿಡುಗಡೆಯಾಗುವಾಗಲೆಲ್ಲಾ ಟಿಕೆಟ್ ದರ ಹೆಚ್ಚಳವಾಗುತ್ತಿರುವುದರಿಂದ ಪ್ರೇಕ್ಷಕರು ಬೇಸತ್ತಿದ್ದು, ಈ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಸಾಮಾನ್ಯ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಟಿಕೆಟ್ ದರಗಳು ಸಮತೋಲನದಲ್ಲೇ ಇರುತ್ತವೆ. ಆದರೆ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾದಾಗ ಐದು ದಿನಗಳಿಂದ ಒಂದು ವಾರದವರೆಗೆ ವಿಶೇಷ ದರ ವಿಧಿಸುವುದು ರೂಢಿಯಾಗಿದೆ.
ಇದನ್ನೂ ಓದಿ:
ಈ ದರ ಏರಿಕೆಗೆ ನಿರ್ಮಾಪಕರು ಸರ್ಕಾರದಿಂದ ಅನುಮತಿ ಪಡೆದುಕೊಳ್ಳುತ್ತಾರೆ. ಆದರೂ ಪ್ರತಿ ಬಾರಿ ಟಿಕೆಟ್ ದರ ಹೆಚ್ಚಳವಾಗುತ್ತಿದ್ದಂತೆ ಸಿನಿಮಾ ಪ್ರೇಮಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಹಿನ್ನೆಲೆ ಆಂಧ್ರ ಪ್ರದೇಶದ ಸಿನಿಮಾಟೊಗ್ರಫಿ ಸಚಿವ ಕಂಡುಲ ದುರ್ಗೇಶ್ ಪ್ರತಿಕ್ರಿಯಿಸಿ, ಏಕರೂಪ ಟಿಕೆಟ್ ದರ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಟಿಕೆಟ್ ದರಗಳು ಪ್ರೇಕ್ಷಕರಿಗೂ ಹಾಗೂ ಚಿತ್ರರಂಗಕ್ಕೂ ಸಮಾನವಾಗಿ ಅನುಕೂಲಕರವಾಗುವಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮತ್ತು ತೆಲುಗು ಚಿತ್ರರಂಗದ ಪ್ರಮುಖರೊಂದಿಗೆ ಈಗಾಗಲೇ ಸಭೆಗಳು ನಡೆದಿವೆ.

