ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಬಿಜೆಪಿಯ ಮಹಾರಾಷ್ಟ್ರ ಸಂಸದೆ ಪ್ರೀತಮ್ ಮುಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೇ ಮಹಿಳೆ ನೀಡಿದ ದೂರಿನ ಬಗ್ಗೆಯೂ ಗಮನಹರಿಸಬೇಕು. ದೂರಿನ ಬಗ್ಗೆ ಗಮನ ಹರಿಸಿದ ನಂತರ ದೂರು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧಿಕಾರಿಗಳು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ನಾನು ಸಂಸತ್ತಿನ ಸದಸ್ಯಳಾಗಿ ಅಲ್ಲ. ಆದರೆ ಮಹಿಳೆಯಾಗಿ, ಯಾವುದೇ ಮಹಿಳೆಯಿಂದ ಅಂತಹ ದೂರು ಬಂದರೆ, ಅದನ್ನು ಸ್ವೀಕರಿಸಬೇಕು. ಅದನ್ನು ಪರಿಶೀಲಿಸಬೇಕು . ಪರಿಶೀಲನೆಯ ನಂತರ, ಅಧಿಕಾರಿಗಳು ಇದು ಸರಿಯಾಗಿದೆಯೇ ಅಥವಾ ಅಸಮರ್ಪಕವಾಗಿದೆಯೇ ಎಂದು ನಿರ್ಧರಿಸಬೇಕು. ದೂರನ್ನು ಸ್ವೀಕರಿಸದೇ ಇದ್ದರೆ ಪ್ರಜಾಪ್ರಭುತ್ವದಲ್ಲಿ ಅದು ಸರಿಯಲ್ಲ ಎಂದಿದಾರೆ.
ಬಿಜೆಪಿಗೆ ದೇಶ ಮೊದಲು, ನಂತರ ಪಕ್ಷ, ನಂತರ ವೈಯಕ್ತಿಕ ಸಂಗತಿ. ಆದರೆ ಅದು ಕೊನೆಯದಾಗಿದ್ದರೂ, ಒಬ್ಬರ ವೈಯಕ್ತಿಕ ಆಲೋಚನೆಗಳು ಮುಖ್ಯ, ಯಾವುದೇ ರಾಜ್ಯದ ಯಾವುದೇ ಪಕ್ಷದ ಸರ್ಕಾರವಾಗಿರಬಹುದು, ಗಮನ ಹರಿಸಬೇಕು ಎಂದು ನಾನು ನಂಬುತ್ತೇನೆ. ಈ ಮಟ್ಟದ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಇದಕ್ಕೆ ಬೆಲೆ ತೆರಬೇಕಾಗಿ ಬರುತ್ತದೆ ಎಂದಿದ್ದಾರೆ.
ಪ್ರೀತಮ್ ಮುಂಡೆ 2014 ರಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿಯರಾಗಿದ್ದಾರೆ.
ಕುಸ್ತಿಪಟುಗಳಿಗೆ ನ್ಯಾಯ ಸಿಗುತ್ತದೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ
ಲೈಂಗಿಕ ಕಿರುಕುಳ ಆರೋಪದ ಮೇಲೆ ನಿರ್ಗಮಿತ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಕೋರಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಗುರುವಾರ ಹೇಳಿದ್ದಾರೆ. ಅವರಿಗ ನ್ಯಾಯ ಸಿಗುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಲೋಕಸಭಾ ಸಂಸದರು ಕುಸ್ತಿಪಟುಗಳ ಸಮಸ್ಯೆಯ ಬಗ್ಗೆ ತಮ್ಮ ನಿಲುವಿನ ಬಗ್ಗೆ ಕೇಳಿದಾಗ ಸುದ್ದಿಗಾರರಿಗೆ ತಿಳಿಸಿದರು.