ಈ ವರ್ಷ ಚಾತುರ್ಮಾಸ ದೇವಶಯನಿ ಏಕಾದಶಿ ದಿನವಾದ ಜುಲೈ 6, 2025ರಂದು ಪ್ರಾರಂಭವಾಗಲಿದೆ. ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸುವ ಈ ನಾಲ್ಕು ತಿಂಗಳ ಕಾಲಾವಧಿ ಆಧ್ಯಾತ್ಮಿಕ ಶಿಸ್ತು, ಭಕ್ತಿಯಮಯ ಆಚರಣೆ ಮತ್ತು ಆತ್ಮಾವಲೋಕನೆಗೆ ಶ್ರೇಷ್ಠ ಸಮಯವೆಂದು ನಂಬಲಾಗುತ್ತದೆ.
ಪೌರಾಣಿಕ ನಂಬಿಕೆಯ ಪ್ರಕಾರ, ಪ್ರತಿ ವರ್ಷ, ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ದೇವಶಯನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನದಂದು, ವಿಷ್ಣು ನಾಲ್ಕು ತಿಂಗಳುಗಳ ಕಾಲ ಆಳವಾದ ಧ್ಯಾನಸ್ಥ ನಿದ್ರೆಗೆ (ಯೋಗ ನಿದ್ರೆ) ಪ್ರವೇಶಿಸುತ್ತಾನೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಶಿವನು ಬ್ರಹ್ಮಾಂಡದ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಿಂದಾಗಿ, ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳನ್ನು ನಡೆಸುವುದು ಅನನೂಕೂಲವೆಂದು ಪರಿಗಣಿಸಲಾಗುತ್ತದೆ.
ಚಾತುರ್ಮಾಸದಲ್ಲಿ ತಪ್ಪಿಸಬೇಕಾದ ಕಾರ್ಯಗಳು:
ಚಾತುರ್ಮಾಸದ ಸಮಯದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣ, ಮುಂಡನ ಮುಂತಾದ ಶುಭ ಕಾರ್ಯಕ್ರಮಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ನವೀನ ಉದ್ಯಮಗಳು ಅಥವಾ ಮಹತ್ವದ ಜೀವನ ನಿರ್ಣಯಗಳನ್ನು ಆರಂಭಿಸುವುದು ಕೂಡ ಒಳಿತಲ್ಲ ಎನ್ನಲಾಗುತ್ತದೆ.
ಅಷ್ಟೇ ಅಲ್ಲದೇ ಈ ಅವಧಿಯಲ್ಲಿ ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ತಾಮಸಿಕ ಆಹಾರವನ್ನು ಸೇವಿಸಬಾರದು. ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಳ್ಳಲು ಸಾತ್ವಿಕ ಆಹಾರವನ್ನು ಸೇವಿಸಬೇಕು.
ಈ ಸಮಯದಲ್ಲಿ ಮಾಡಬೇಕಾದ ಆಚರಣೆಗಳು:
ಚಾತುರ್ಮಾಸದಲ್ಲಿ ದೇವರ ಭಜನೆ, ಮಂತ್ರ ಪಠಣ, ಶ್ಲೋಕ ಪಠಣ, ಧ್ಯಾನ, ತಪಸ್ಸು, ಉಪವಾಸ ಮುಂತಾದ ಆಚರಣೆಗಳನ್ನು ಪಾಲನೆ ಮಾಡುವುದರಿಂದ ದೈವಿಕ ಅನುಗ್ರಹ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಅಷ್ಟೇ ಅಲ್ಲ, ಈ ಪವಿತ್ರ ಸಮಯದಲ್ಲಿ ದಾನ ಧರ್ಮ ಮಾಡುವುದು ಮಹಾಪುಣ್ಯಕಾರ್ಯವೆಂದು ಪರಿಗಣಿಸಲಾಗುತ್ತದೆ. ಆಹಾರ, ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಬಡವರಿಗೆ ನೀಡುವುದು ವಿಶೇಷ ಫಲ ನೀಡುತ್ತದೆ.
ಈ ನಾಲ್ಕು ತಿಂಗಳುಗಳನ್ನು ವೈಯಕ್ತಿಕ ಶುದ್ಧತೆ, ಆತ್ಮಚಿಂತನ ಮತ್ತು ಶ್ರದ್ಧಾ ಭಕ್ತಿಗೆ ಮೀಸಲಿಡಲಾಗುತ್ತದೆ. ಚಾತುರ್ಮಾಸವು ಜೀವನದಲ್ಲಿ ಸಂಯಮ, ಸಮಾಧಾನ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾದಂತ ಸಮಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)