Tuesday, December 30, 2025

ಚುನಾವಣೆ ಬಂದ್ರೆ ಸಾಕು ದುರ್ಯೋಧನ, ದುಶ್ಯಾಸನ ಬಂಗಾಳದಲ್ಲಿ ಪ್ರತ್ಯಕ್ಷ: ಮೋದಿ, ಶಾ ವಿರುದ್ಧ ದೀದಿ ವ್ಯಂಗ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಭಾರತದ ಇಬ್ಬರು ಖಳ ನಾಯಕರಾದ ದುಶ್ಯಾಸನ ಮತ್ತು ದುರ್ಯೋಧನನಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೋಲಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಯೋತ್ಪಾದಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಲ್ಕತ್ತಾ ಭೇಟಿಯ ವೇಳೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ,ಶಕುನಿಯ ಶಿಷ್ಯ ದುಶ್ಶಾಸನ ಮಾಹಿತಿಯನ್ನು ಸಂಗ್ರಹಿಸಲು ಬಂಗಾಳಕ್ಕೆ ಬಂದಿದ್ದಾನೆ. ಚುನಾವಣೆ ಹತ್ತಿರ ಬಂದ ತಕ್ಷಣ ದುಶ್ಶಾಸನ ಮತ್ತು ದುರ್ಯೋಧನ ಇಬ್ಬರೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ ಎಂದು ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳ ಭಯೋತ್ಪಾದಕರ ನೆಲೆಯಾಗಿದೆ ಎಂದಾದರೆ ಪಹಲ್ಗಾಮ್ ದಾಳಿಯನ್ನು ನಮ್ಮ ಕೇಂದ್ರ ಸರ್ಕಾರವೇ ಕಾರ್ಯಗತಗೊಳಿಸಿದೆಯೇ? ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್‌ನಲ್ಲಿ ದಾಳಿ ಹೇಗೆ ನಡೆಯಿತು? ನೀವು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದೀರಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರ ಕೈವಾಡವಿದೆ? ಎಂದು ಅಮಿತ್ ಶಾ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಡಿಸೆಂಬರ್ 20ರಂದು ಪ್ರಧಾನಿ ಮೋದಿ ಬಂಗಾಳಕ್ಕೆ ಭೇಟಿ ನೀಡಿದ್ದರು. 2026ರ ಬಂಗಾಳ ಚುನಾವಣೆಗೂ ಮುಂಚಿತವಾಗಿ ಅಮಿತ್ ಶಾ ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯಕ್ಕೆ 3 ದಿನಗಳ ಭೇಟಿಯಲ್ಲಿದ್ದಾರೆ.

error: Content is protected !!