ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಖಿಲ್ ಕುಮಾರಸ್ವಾಮಿಯವರು ಎರಡು ಬಾರಿ ಸೋತಿದ್ದರು ಆಗ ಅಭಿಮನ್ಯು ಆಗಿರಲಿಲ್ಲವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಈ ಬಾರಿ ನಿಖಿಲ್ ಅಭಿಮನ್ಯು ಅಲ್ಲ, ಅರ್ಜುನ ಆಗಿ ಬರುತ್ತಾನೆ ಎಂಬ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎರಡು ಬಾರಿ ಚುನಾವಣೆಯಲ್ಲಿ ಸೋತಾಗ ನಿಖಿಲ್ ಅಭಿಮನ್ಯು ಆಗಿರಲಿಲ್ವಾ?. ಮಂಡ್ಯ, ರಾಮನಗರದಲ್ಲಿ ಸೋತಿದ್ದಾರೆ. ಈಗ ಇದ್ದಕ್ಕಿದ್ದಂತೆ ಅರ್ಜುನ ಆಗುತ್ತಾರಾ? ಎಂದು ಪ್ರಶ್ನಿಸಿದರು.
ಉಪಚುನಾವಣೆಗಳ ಸಿದ್ದತೆಗಳ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲು ಸಚಿವರು, ಸಂಸದರು, ಶಾಸಕರೊಂದಿಗೆ ಸಭೆ ನಡೆಸಲಾಯಿತು ಎಂದು ಇದೇ ವೇಳೆ ಸಿಎಂ ತಿಳಿಸಿದರು. ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು, ಕಳೆದ ಎರಡು ಬಾರಿಯೂ ನಿಖಿಲ್ ಕುಮಾರಸ್ವಾಮಿ ಅವರನ್ನು ವಿರೋಧಿಗಳು ತಮ್ಮ ಕುತಂತ್ರದಿಂದಲೇ ನಿಖಿಲ್ ಅವರ ಸೋಲಿಗೆ ಕಾರಣರಾಗಿದ್ದರು. ಆ ರೀತಿಯ ತಪ್ಪುಗಳಿಗೆ ಈ ಬಾರಿ ಅವಕಾಶ ಇಲ್ಲ. ಚನ್ನಪಟ್ಟಣದಲ್ಲಿ ಜನ ನಿಖಿಲ್ ಕುಮಾರಸ್ವಾಮಿ ಅವರನ್ನು ಇಲ್ಲಿನ ಜನ ಅಭಿಮನ್ಯು ಆಗುವುದಕ್ಕೆ ಅವಕಾಶ ನೀಡುವುದಿಲ್ಲ. ಇಲ್ಲಿನ ಜನ ಅವರಿಗೆ ಅರ್ಜುನನ ಪಾತ್ರ ಕೊಡಲಿದ್ದಾರೆ ಎಂದು ಹೇಳಿದ್ದರು