ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಾರಿಯಾದ ಆರ್ಥಿಕ ಅಪರಾಧಿ ಎನ್ನುವ ಘೋಷಣೆ ಮತ್ತು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇದರ ವಿಚಾರಣೆ ನಡೆಸಿದ ನ್ಯಾಯಾಲಯವು, ಭಾರತಕ್ಕೆ ಯಾವಾಗ ಮರಳುವ ಉದ್ದೇಶವಿದೆ ಎಂದು ಪ್ರಶ್ನಿಸಿದೆ.
ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿರುದ್ಧದ ವಿಜಯ್ ಮಲ್ಯ ಅವರು ಹೈಕೋರ್ಟ್ ವ್ಯಾಪ್ತಿಗೆ ಸಲ್ಲಿಸದ ಅರ್ಜಿಯನ್ನು ಆಲಿಸಲಾಗುವುದಿಲ್ಲ ಎಂದಿರುವ ಬಾಂಬೆ ಹೈಕೋರ್ಟ್, ಅವರು ಭಾರತಕ್ಕೆ ಮರಳಲು ಉದ್ದೇಶಿಸಿರುವುದು ಯಾವಾಗ ಎಂದು ಅವರ ವಕೀಲರನ್ನು ಪ್ರಶ್ನಿಸಿದೆ.
ವಿಜಯ್ ಮಲ್ಯ ಅವರು ಮೊದಲು ನ್ಯಾಯಾಲಯಕ್ಕೆ ಹಾಜರಾಗಬೇಕು. ಬಳಿಕ ಕಾಯ್ದೆಯ ವಿರುದ್ಧ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅನ್ಖಡ್ ಅವರ ಪೀಠವು ವಿಜಯ್ ಮಲ್ಯ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲ ಅಮಿತ್ ದೇಸಾಯಿ ಅವರಿಗೆ ತಿಳಿಸಿದೆ.
ದೇಶದ ನ್ಯಾಯಾಲಯಗಳಿಗೆ ಹಾಜರಾಗದೆ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲು ಪರಾರಿಯಾದವರಿಗೆ ಅವಕಾಶ ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.
ಮಲ್ಯ ಅವರು ಸಲ್ಲಿಸಿರುವ ಎರಡೂ ಅರ್ಜಿಗಳ ಕುರಿತು ಒಟ್ಟಿಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದ ನ್ಯಾಯಪೀಠ, ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪ್ರವರ್ತಕರಿಗೆ ಅವರು ಯಾವ ಅರ್ಜಿಯನ್ನು ವಿಲೇವಾರಿ ಮಾಡಲು ಬಯಸುತ್ತಾರೆ, ಯಾವುದನ್ನೂ ಹಿಂಪಡೆಯಲು ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ.
ಮಲ್ಯ ಅವರ 14,000 ಕೋಟಿ ರೂ. ಮೌಲ್ಯದ ಆಸ್ತಿಗಳ ಮುಟ್ಟುಗೋಲು ಮಾಡಿಕೊಳ್ಳಲಾಗಿದೆ ಮತ್ತು ಸಾಲ ನೀಡಿದ ಬ್ಯಾಂಕುಗಳು 6,000 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದೆ. ಈ ಮೂಲಕ ಅವರ ಸಾಲ ಮರುಪಾವತಿ ಹೊಣೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಅಮಿತ್ ದೇಸಾಯಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ನ್ಯಾಯಾಲಯಕ್ಕೆ ಬಾರದೆ ಅವರ ಮೇಲಿರುವ ಕ್ರಿಮಿನಲ್ ಕೇಸ್ ಅನ್ನು ಅಳಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದ ನ್ಯಾಯಪೀಠ ಇದಕ್ಕೂ ಮೊದಲು ಮಲ್ಯ ಅವರು ಯಾವ ಅರ್ಜಿಯ ವಿಚಾರಣೆಯನ್ನು ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ತಿಳಿಸಿದೆ.

