ಹೊಸ ದಿಗಂತ ವರದಿ,ಚಿತ್ರದುರ್ಗ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಗರಣಗಳು ನಡೆದಿವೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಎಲ್ಲಾ ಇಲಾಖೆಯಲ್ಲಿ ಹಗರಣ ಮಾಡಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಹೊರವಲಯದಲ್ಲಿರುವ ಬೋವಿ ಗುರುಪೀಠದಲ್ಲಿ ಶನಿವಾರ ನಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ೨೫ನೇ ವರ್ಷದ ದೀಕ್ಷಾ ಕಾರ್ಯಕ್ರಮದ ರಜತ ಮಹೋತ್ಸವಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಪ್ರಾಮಾಣಿಕ ಸಿಎಂ ಅಂತ ಅಂದುಕೊಂಡಿದ್ದೆ. ಆದರೆ ಈಗ ಕೇಳಿ ಬರುತ್ತಿರುವ ಹಗರಣ ನಮ್ಮನ್ನು ಬೆಚ್ಚಿ ಬೀಳಿಸಿವೆ ಎಂದರು.
ವಾಲ್ಮೀಕಿ ಹಗರಣದಿಂದ ಸರ್ಕಾರ ಪರಿಶಿಷ್ಟ ವರ್ಗದವರಿಗೆ ಮೋಸ ಮಾಡಿದೆ. ಚಂದ್ರಶೇಖರ್ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಹಣಕಾಸು ಸಚಿವರಾಗಿ ಇದನ್ನ ಗಮನಿಸಬೇಕಿತ್ತು. ಸಿಎಂ ಸಿದ್ದರಾಮಯ್ಯ ಈ ಹಗರಣದಲ್ಲಿ ಸ್ವತಃ ಭಾಗಿ ಆಗಿದ್ದಾರೆ. ಹೈಕಮಾಂಡ್ ಸಿಎಂಗೆ ಒಂದು ಟಾರ್ಗೆಟ್ ಕೊಟ್ಟಿತ್ತು. ತೆಲಂಗಾಣ ಚುನಾವಣೆಗೆ ಇಷ್ಟು ಹಣ ಬೇಕು ಅಂತ ಟಾರ್ಗೆಟ್ ಕೊಟ್ಟಿತ್ತು. ಬಂಜಾರಾ ಹಿಲ್ಸ್‌ನ ಬ್ಯಾಂಕ್ ಒಂದಕ್ಕೆ ಹಣ ವರ್ಗಾವಣೆ ಆಗಿದೆ. ವೈನ್ ಶಾಪ್, ಟೆಂಟ್ ಹೌಸ್ ಗೆ ಹಣ ವರ್ಗಾವಣೆ ಆಗಿದೆ ಎಂದು ದೂರಿದರು.
ಮೂಡ ೩.೧೬ ಎಕರೆ ವಶ ಮಾಡಿಕೊಂಡಿತ್ತು. ಆಗಲೂ ಸಹ ಸಿದ್ದರಾಮಯ್ಯ ಸಿಎಂ ಆಗಿದ್ದರು. ಸಿದ್ದರಾಮಯ್ಯ ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದಾಗಲೇ ಹಗರಣ ಆಗಿದೆ. ಕಾನೂನು ಬಾಹಿರವಾಗಿ ಸಿಎಂ ಪತ್ನಿ ಅಸ್ತಿ ಪಡೆದುಕೊಂಡಿದ್ದಾರೆ. ಮುಂದೆ ಬರುವ ಸೈಟ್‌ಗೆ ಮಾತ್ರ ೫೦:೫೦ ಆಗಿತ್ತು. ಇವರು ತೆಗೆದುಕೊಂಡಾಗ ಆ ಕಾನೂನು ಅಪ್ಲೇ ಆಗಿಲ್ಲ. ಸಿಎಂಗೆ ಪರಿಹಾರ ಬೇಕಂತೆ, ಪರಿಹಾರ ಏಕೆ ಬೇಕಿತ್ತು ಎಂದು ಪ್ರಶ್ನಿಸಿದರು.
ವಕೀಲರಾಗಿ ನೀವು ಮೂಡ ಕಾನೂನು ಉಲ್ಲಂಘನೆ ಮಾಡಿದ್ದೀರಿ. ಈ ಹಗರಣ ಕುರಿತು ನಿಮ್ಮ ಪತ್ನಿ, ಮಗ, ನೀವು ಮೌನ ವಹಿಸಿದ್ದೀರಿ. ನವೆಂಬರ್ ೨೦೨೩ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ೧೦೦೦ ಕೋಟಿ ಹಗರಣ ಆಗಿದೆ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಪ್ರಕರಣವನ್ನ ಮುಚ್ಚಿ ಹಾಕಲು ಹೊರಟಿದ್ದೀರಾ? ಈ ಮೂಡ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.