ಹೊಸದಿಗಂತ ಗದಗ:
ಜಿಲ್ಲೆಯಲ್ಲಿ ಸದ್ಯ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಸಾಮಾನ್ಯ ಜನರು ಒಂದು ಸಿಲಿಂಡರ್ಗಾಗಿ ಪರದಾಡುತ್ತಿದ್ದರೆ, ಇತ್ತ ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಅಷ್ಟೇ ಅಲ್ಲದೆ, ಮಠ-ಮಾನ್ಯಗಳ ದಾಸೋಹಕ್ಕೂ ಅನಿಲದ ಕೊರತೆ ಬಿಸಿ ತಟ್ಟಿದೆ. ವಿಪರ್ಯಾಸವೆಂದರೆ, ಆಡಳಿತಾರೂಢ ಕಾಂಗ್ರೆಸ್ ಕಾರ್ಯಕರ್ತರೇ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಸಚಿವ ಎಚ್.ಕೆ. ಪಾಟೀಲರ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 12 ಕಮರ್ಷಿಯಲ್ ಸಿಲಿಂಡರ್ಗಳು ಬಳಕೆಯಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದಿವಂಗತ ಕೆ.ಎಚ್. ಪಾಟೀಲರ 101ನೇ ಜಯಂತೋತ್ಸವದ ಅಂಗವಾಗಿ ಗದಗನ ಕಾಟನ್ ಸೇಲ್ ಸೊಸೈಟಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಆಗಮಿಸುವ ಸುಮಾರು 10 ಸಾವಿರ ಜನರಿಗೆ ಕೆ.ಎಚ್. ಪಾಟೀಲ್ ಅಭಿಮಾನಿಗಳ ಬಳಗದಿಂದ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಅಡುಗೆ ತಯಾರಿಕೆಗಾಗಿ ರಾಜಾರೋಷವಾಗಿ 12 ಕಮರ್ಷಿಯಲ್ ಸಿಲಿಂಡರ್ಗಳನ್ನು ಬಳಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ ಹಾಗೂ ಎಚ್.ಕೆ. ಪಾಟೀಲ್ ಅವರು ಭಾಗವಹಿಸಿದ್ದಾರೆ. ಗಣ್ಯರಿಗಾಗಿ ಮತ್ತು ಸಾರ್ವಜನಿಕರಿಗಾಗಿ ಚಪಾತಿ, ರೊಟ್ಟಿ, ಅನ್ನ-ಸಾಂಬಾರ್, ಮೊಸರು ಅನ್ನ ಹಾಗೂ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಲು ಈ ಸಿಲಿಂಡರ್ಗಳನ್ನು ವಿನಿಯೋಗಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಸಿಲಿಂಡರ್ ಸಿಗದೆ ಜನರು ಹೈರಾಣಾಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಅನ್ವಯವಾಗುವ ನಿಯಮಗಳು ಸಚಿವರಿಗೆ ಅನ್ವಯವಾಗುವುದಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ತಮ್ಮ ಪ್ರಭಾವ ಬಳಸಿ ಸಚಿವರು ಇಷ್ಟೊಂದು ಸಿಲಿಂಡರ್ಗಳನ್ನು ಪಡೆದುಕೊಂಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಇದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.



