October 18, 2026
Sunday, October 18, 2026
spot_img

ಗ್ರಾಹಕರ ಹಣ ವಿದೇಶಕ್ಕೆ ಶಿಫ್ಟ್? ಮಂತ್ರಿ ಡೆವಲಪರ್ಸ್ ಕಚೇರಿಗಳಲ್ಲಿ ED ಅಧಿಕಾರಿಗಳ ದಂಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ‘ಮಂತ್ರಿ ಡೆವಲಪರ್ಸ್’ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯ ಕಚೇರಿಗಳು ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ಅವರ ನಿವಾಸಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಸಂಸ್ಥಾಪಕರ ಮನೆ ಸೇರಿದಂತೆ ವಿವಿಧೆಡೆ ಶೋಧ ನಡೆಯುತ್ತಿದೆ.

ದೆಹಲಿಯಿಂದ ಆಗಮಿಸಿರುವ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡ, ಆರು ವಾಹನಗಳಲ್ಲಿ ಬಂದು ಏಕಕಾಲಕ್ಕೆ ದಾಳಿ ಸಂಘಟಿಸಿದೆ.

ಗ್ರಾಹಕರಿಂದ ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡು, ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಗಂಭೀರ ಆರೋಪ ಸಂಸ್ಥೆಯ ಮೇಲಿದೆ.

ಈ ಹಿಂದೆ 2022ರಲ್ಲೂ ಇಡಿ ದಾಳಿ ನಡೆಸಿತ್ತು. ಅದರ ಮುಂದುವರಿದ ಭಾಗವಾಗಿ 2023ರಲ್ಲಿ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಇದೀಗ ಮತ್ತಷ್ಟು ಸಾಕ್ಷ್ಯಾಧಾರಗಳಿಗಾಗಿ ಈ ಕಾರ್ಯಾಚರಣೆ ಮುಂದುವರಿದಿದೆ.

1999ರಲ್ಲಿ ಆರಂಭವಾದ ಮಂತ್ರಿ ಡೆವಲಪರ್ಸ್ ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲೂ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳ ಬೃಹತ್ ಯೋಜನೆಗಳನ್ನು ಹೊಂದಿದೆ. ಸದ್ಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ.

Must Read