ಹೊಸದಿಗಂತ ಡಿಜಿಟಲ್ ಡೆಸ್ಕ್:
“ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇತ್ತೀಚಿನ ಪಟ್ಟಣ ಪಂಚಾಯತಿ ಚುನಾವಣೆಗಳೇ ಸಾಕ್ಷಿ. ರಾಜ್ಯಾದ್ಯಂತ ಬಿಜೆಪಿ ಗೆದ್ದು ಬೀಗುತ್ತಿದ್ದು, ಕಾಂಗ್ರೆಸ್ ಆಡಳಿತಕ್ಕೆ ಜನರು ಬೇಸತ್ತಿದ್ದಾರೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ವಿಜಯೇಂದ್ರ, “ಅಟಲ್ ಅವರ ಹೆಸರು ಕೇಳಿದರೆ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡುತ್ತದೆ. ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ರಾಜ್ಯದ ಹಿರಿಯ ನಾಯಕರಿಗೆ ದಾರಿದೀಪವಾಗಿದ್ದರು,” ಎಂದು ಸ್ಮರಿಸಿದರು.
“ಕಾಂಗ್ರೆಸ್ಸಿಗರಿಗೆ ಲೂಟಿ ಮಾಡುವುದನ್ನು ಬಿಟ್ಟರೆ ಬೇರೇನೂ ತಿಳಿದಿಲ್ಲ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ, ಬದಲಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎನ್ನುವ ದೇಶದ್ರೋಹಿಗಳ ವಿರೋಧಿ. ಪ್ರಧಾನಿ ಮೋದಿ ನೇತೃತ್ವದ 11 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ವಿಪಕ್ಷಗಳಿಗೆ ಸಾಧ್ಯವಾಗಿಲ್ಲ. ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆದರೂ ಅಥವಾ ಇವಿಎಂ ಮೂಲಕ ನಡೆದರೂ ಕಾಂಗ್ರೆಸ್ ಸೋಲು ಖಚಿತ,” ಎಂದು ಭವಿಷ್ಯ ನುಡಿದರು.
ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣವಿದೆ ಎಂದ ವಿಜಯೇಂದ್ರ, “ರಾಜ್ಯದಲ್ಲಿ ಕಳೆದ ಬಾರಿ ಸ್ವಯಂಕೃತ ಅಪರಾಧಗಳಿಂದ ಅಧಿಕಾರ ಕಳೆದುಕೊಂಡಿರಬಹುದು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ 130ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ,” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಜಗದೀಶ್ ಶೆಟ್ಟರ್, ಪರಿಷತ್ ಸಚೇತಕ ರವಿಕುಮಾರ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

