ಹೊಸದಿಗಂತ ವರದಿ ಮಡಿಕೇರಿ:
ಬಿಳಿ ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.
ಕಾಸರಗೋಡಿನ ಮಂಜೇಶ್ವರದ ನಿವಾಸಿಗಳಾದ ಮಹಮ್ಮದ್ ನಡುಬೈಲ್, ಅಬ್ದುಲ್ ಸತ್ತಾರ್ ಹಾಗೂ ದಕ್ಷಿಣ ಕನ್ನಡದ ದೇರಳ ಕಟ್ಟೆಯ ಬಿ.ಶೇಕಬ್ಬ ಬಂಧಿತ ಆರೋಪಿಗಳು.
ಮಾರುತಿ ವ್ಯಾಗನರ್ ವಾಹನದಲ್ಲಿ ಜೀವಂತ ಬಿಳಿ ಗೂಬೆಯನ್ನು ಅಧಿಕ ಬೆಲೆಗೆ ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳ ಸಹಿತ ಬಿಳಿ ಗೂಬೆ ಮತ್ತು ಕಾರನ್ನು ವಶಕ್ಕೆ ಪಡೆದರು. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ.ಮಂಜುನಾಥ್, ಕೆ.ಎಸ್.ದೇವಯ್ಯ, ಸಿ.ಬಿ.ಬೀನಾ, ಎಸ್.ಎಂ.ಯೋಗೇಶ್, ಪಿ.ಯು.ಮುನೀರ್ ಹಾಗೂ ಆರ್. ನಂದಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.