ಹೊಸದಿಗಂತ ಕಲಘಟಗಿ:
ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನ ಅಕಾಲಿಕವಾಗಿ ಸುರಿದ ಭಾರಿ ಗಾಳಿ ಮಳೆ ಮತ್ತು ಆಲಿಕಲ್ಲು ವರ್ಷಧಾರೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವರ್ಷದ ಮೊದಲ ದೊಡ್ಡ ಮಳೆಯೇ ಆಲಿಕಲ್ಲು ರೂಪದಲ್ಲಿ ಬಂದಿಳಿದಿದ್ದು, ರೈತರ ಮುಖದಲ್ಲಿ ಆತಂಕದ ಗೆರೆಗಳು ಮೂಡಿವೆ.
ಕಲಘಟಗಿ ಪಟ್ಟಣ ಸೇರಿದಂತೆ ಮಾಚಾಪುರ, ಬೆಲವಂತರ ಹಾಗೂ ಸೋಮನಕೊಪ್ಪ ಗ್ರಾಮಗಳಲ್ಲಿ ಆಲಿಕಲ್ಲುಗಳ ಸುರಿಮಳೆಯೇ ಆಗಿದೆ. ವಿಶೇಷವಾಗಿ ಮಾಚಾಪುರದಲ್ಲಿ ರಸ್ತೆಗಳು ಹಾಗೂ ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ನೋಡುಗರಿಗೆ ಕಾಶ್ಮೀರದ ಹಿಮಪಾತದ ಅನುಭವ ನೀಡಿತು. ರಸ್ತೆಯ ತುಂಬಾ ಆಲಿಕಲ್ಲು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರದ ವಾರದ ಸಂತೆಗೆ ತಾಲೂಕಿನಾದ್ಯಂತ ನೂರಾರು ಜನ ಆಗಮಿಸಿದ್ದರು. ಹಬ್ಬದ ದಿನಸಿ ಹಾಗೂ ತರಕಾರಿ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಮಧ್ಯಾಹ್ನ 3:30ಕ್ಕೆ ಶುರುವಾದ ಮಳೆ ತಣ್ಣೀರು ಎರಚಿತು. ಸಂತೆ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾದರು.

ಈ ಆಲಿಕಲ್ಲು ಮಳೆ ಕೇವಲ ಕುತೂಹಲ ಮೂಡಿಸದೆ, ಕೃಷಿ ಕ್ಷೇತ್ರಕ್ಕೆ ಭಾರಿ ಪೆಟ್ಟು ನೀಡಿದೆ. ಈ ಕುರಿತು ರೈತ ಮುಖಂಡರಾದ ಪರಶುರಾಮ ಎತ್ತಿನಗುಡ್ಡ ಹಾಗೂ ಉಳುವಪ್ಪ ಬಳಿಗೇರ ಮಾತನಾಡಿ, “ಅಕಾಲಿಕ ಮಳೆಯಿಂದಾಗಿ ಹಿಂಗಾರು ಬೆಳೆಗಳು ಮತ್ತು ಮುಖ್ಯವಾಗಿ ಮಾವಿನ ಬೆಳೆಗೆ ಭಾರಿ ಹಾನಿಯಾಗಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಲಿಕಲ್ಲು ಮಳೆ ನಿರಾಸೆ ಮೂಡಿಸಿದೆ. ತಬಕದಹೊನ್ನಳ್ಳಿ, ಬೀರವಳ್ಳಿ ಹಾಗೂ ಹುಣಸಿಕಟ್ಟಿ ಭಾಗಗಳಲ್ಲಿ ಮಾವಿನ ಕಾಯಿಗಳು ನೆಲಕ್ಕಚ್ಚಿವೆ,” ಎಂದು ಅಳಲು ತೋಡಿಕೊಂಡರು.

ತಾಲೂಕಿನಾದ್ಯಂತ ಸುರಿದ ಈ ಅಪರೂಪದ ಆಲಿಕಲ್ಲು ಮಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ವಾಟ್ಸಾಪ್ ಸ್ಟೇಟಸ್ ಹಾಗೂ ಫೇಸ್ಬುಕ್ನಲ್ಲಿ ಎಲ್ಲೆಡೆ ಬಿಳಿ ಆಲಿಕಲ್ಲುಗಳ ರಾಶಿಯ ದೃಶ್ಯಗಳೇ ರಾರಾಜಿಸುತ್ತಿವೆ.



