ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪೀಣ್ಯ ಫ್ಲೈಓವರ್‌ನ ಪಿಲ್ಲರ್‌ನೊಳಗಿನ ಖಾಲಿ ಜಾಗದಲ್ಲಿ ಒಬ್ಬ ವ್ಯಕ್ತಿ ಆರಾಮವಾಗಿ ಮಲಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ದೃಶ್ಯವನ್ನು ಕಂಡ ಜನರು ಬೆಚ್ಚಿಬಿದ್ದಿದ್ದು, ಅಂಥಾ ಕಿರಿದಾದ ಹಾಗೂ ಅಪಾಯಕಾರಿ ಸ್ಥಳದೊಳಗೆ ಆತ ಹೇಗೆ ಹೋಗಿದ್ದಾನೆ ಎಂಬ ಕುತೂಹಲ ವ್ಯಕ್ತವಾಗಿದೆ.
ವೀಡಿಯೋದಲ್ಲಿ ವ್ಯಕ್ತಿ ಪಿಲ್ಲರ್‌ನ ಒಳಗಿನ ಮೇಲ್ಭಾಗದಲ್ಲಿ ಬಿದ್ದಂತೆ ಮಲಗಿರುವುದು ಕಂಡುಬಂದಿದೆ. ಈ ವಿಚಿತ್ರ ದೃಶ್ಯ ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಚಾರಿಗಳನ್ನು ಬೆರಗುಗೊಳಿಸಿದ್ದು, ಕೆಲವರು ಆತನಿಗೆ ಸಹಾಯ ಅಗತ್ಯವಿದೆಯೇ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಕೆಲವರು ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಕೆಲವು ಗಂಟೆಗಳಲ್ಲೇ ಅದು ಲಕ್ಷಾಂತರ ಜನರ ಗಮನ ಸೆಳೆದಿದೆ.
ಈ ಕುರಿತು ಕರ್ನಾಟಕ ಪೋರ್ಟ್‌ಫೋಲಿಯೋ ಎಕ್ಸ್ ತಾಣ ಮೊದಲಿಗೆ ವರದಿ ಮಾಡಿದ್ದು, ಬಳಿಕ ಬೆಂಗಳೂರು ಪೊಲೀಸರು ಕೂಡ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಗೆ ಈ ಘಟನೆಯ ಕುರಿತು ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆ ವ್ಯಕ್ತಿ ಅಶ್ರಯವಿಲ್ಲದವನೇ ಅಥವಾ ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು “ಆತನಿಗೆ ಸಹಾಯ ಮಾಡಬೇಕು” ಎಂದು ಹೇಳಿದರೆ, ಇನ್ನು ಕೆಲವರು “ಇದು ಸ್ಟಂಟ್ ಆಗಿದ್ದರೆ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.

