ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಸಿಎಂ ಯಾರು.? ಡಿಸಿಎಂ ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟ ಪಡಿಸುವಂತೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುರ್ಚಿ ಕದನ ಜೋರಾಗಿ ನಡೆಯುತ್ತಿದೆ. ಸಿಎಂ ಒಮ್ಮೆ, ಡಿಸಿಎಂ ಒಮ್ಮೆ ಎರಡು ಬಾರಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಅದೇನೋ ನಾಟಿ ಕೋಳಿ ತಿಂದರು ಅಂತ ಮಾಧ್ಯಮಗಳಲ್ಲಿ ನೋಡಿದೆ ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರು, ಉಪ ಮುಖ್ಯಮಂತ್ರಿ ಯಾರು ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯದ ಜನರು ಈ ಗೊಂದಲದಲ್ಲಿ ಇದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಇದೆ. ಇದಕ್ಕೆ ಕಾರಣ ಕರ್ನಾಟಕದಿಂದ ಚೀಲ ಚೀಲ ಹಣ ಹೋಗುತ್ತದೆ ಎಂದು ಆರೋಪಿಸಿದರು.
ಇಂತಹ ಬ್ರೇಕ್ ಫಾಸ್ಟ್ ಮೀಟಿಂಗ್ ಬಿಡಿ. ನಿಮ್ಮ ನಡೆ, ಸಾಧನೆ ಏನು ತಿಳಿಸಿ. ದೊಡ್ಡ ದೊಡ್ಡ ಜಾಹೀರಾತುಗಳೇ ನಿಮ್ಮ ಸಾಧನೆ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರೋರಿಗೆ ಗೊಂದಲ ಇದೆ. ಕುರ್ಚಿ ಕದನದಿಂದ ಅಭಿವೃದ್ಧಿ ಕುಂಠಿತ, ಆಡಳಿತ ಕುಸಿತ ಉಂಟಾಗಿದೆ ಎಂಬುದಾಗಿ ಗುಡುಗಿದರು.

