ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಗನಾ ರನೌತ್ ಬಗ್ಗೆ ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ಅಭಿನಯ ಶಕ್ತಿಯಿಂದ ಮಾತ್ರವಲ್ಲದೆ, ಕಾಂಟ್ರವರ್ಸಿ ಹೇಳಿಕೆಗಳಿಂದಲೂ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿ ಪ್ರಶಂಸೆ ಪಡೆದ ಕಂಗನಾ, ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸಂಸದೆಯಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದರೂ, ತಮ್ಮ ವೈಯಕ್ತಿಕ ಬದುಕಿನ ವಿಚಾರಗಳು ಜನರ ಕುತೂಹಲಕ್ಕೆ ಕಾರಣವಾಗುತ್ತವೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ಮದುವೆ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, “ನಾನು ಇನ್ನೂ ಮದುವೆಯಾಗಿಲ್ಲ ಎಂದು ನಿಮಗೆ ಹೇಗೆ ಗೊತ್ತು? ನೀವು ನನ್ನನ್ನು ತಿಳಿದಿದ್ದೀರಿ ಎಂದು ಭಾವಿಸಬೇಡಿ…” ಎಂದು ನಗುತ್ತಾ ಉತ್ತರಿಸಿದರು. ಇದನ್ನು ಅವರು ಫನ್‌ಗಾಗಿ ಹೇಳಿದ್ರು. ಬಳಿಕ ಗಂಭೀರವಾಗಿ ಮಾತನಾಡಿದ ಕಂಗನಾ “ಮದುವೆ ನನ್ನ ಜೀವನದ ಪಟ್ಟಿಯಲ್ಲಿ ಇದೆ, ಈಗಾಗಲೇ ತಡವಾಗಿದೆ ಎಂಬುದು ನಿಜ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗಲಿದ್ದೇನೆ” ಎಂದು ಉತ್ತರಿಸಿದ್ದಾರೆ. ಜೊತೆಗೆ, ಕುಟುಂಬದಿಂದಲೂ ಮದುವೆಯ ಒತ್ತಡವಿದೆ, ಆದರೆ ಜೀವನದ ಪ್ರತಿಯೊಂದು ವಿಚಾರವೂ ಸಮಯ ಬಂದಾಗ ಮಾತ್ರ ನಡೆಯುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಂಗನಾ ಲಿವ್-ಇನ್ ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಂದಿನ ಪೀಳಿಗೆ ಲಿವ್-ಇನ್ ಸಂಬಂಧಗಳತ್ತ ಹೆಚ್ಚು ಆಕರ್ಷಿತವಾಗುತ್ತಿರುವುದನ್ನು ಉಲ್ಲೇಖಿಸಿ, “ಲಿವ್-ಇನ್ ಸಂಬಂಧಗಳು ಮಹಿಳೆಯರಿಗೆ ಸೂಕ್ತವಲ್ಲ. ಇಂತಹ ಸಂಬಂಧಗಳಲ್ಲಿ ಅನೇಕ ಬಾರಿ ಯುವತಿಯರು ಗರ್ಭಿಣಿಯಾಗುತ್ತಾರೆ, ನಂತರ ಗರ್ಭಪಾತ ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಮಹಿಳೆಯರ ಆರೋಗ್ಯ ಹಾಗೂ ಭವಿಷ್ಯಕ್ಕೆ ಹಾನಿಕಾರಕ” ಎಂದು ಹೇಳಿದ್ದಾರೆ. ತಾವು ಎಂದಿಗೂ ಲಿವ್-ಇನ್ ಸಂಬಂಧದಲ್ಲಿ ಇರಲಿಲ್ಲವೆಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಕಂಗನಾ ತಮ್ಮ ವೃತ್ತಿ ಬದುಕಿನಲ್ಲಿ ನಿರಂತರವಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಕ್ವೀನ್’, ‘ತನು ವೆಡ್ಸ್ ಮನೂ’ ಸೇರಿದಂತೆ ಹಲವು ಚಿತ್ರಗಳಿಂದ ಮೆಚ್ಚುಗೆ ಪಡೆದ ಅವರು, ಇದೀಗ ರಾಜಕೀಯದಲ್ಲೂ ತಮಗೆ ಆದ ಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಸಿನಿಮಾಗಳಿಗಿಂತಲೂ ಹೆಚ್ಚು ಅವರ ವಿವಾದಾತ್ಮಕ ಹೇಳಿಕೆಗಳು ಸುದ್ದಿಯಾಗುತ್ತವೆ ಎಂಬುದು ಸತ್ಯ.